ರಾಜಕೀಯದಲ್ಲಿ ಸೋಲು, ಗೆಲವು ಸಾಮಾನ್ಯ: ಮರಿದೇವರು
ಕ.ಪ್ರ.ವಾರ್ತೆ ರಾಮನಗರ ಮೇ11
ಕಳೆದ ಮೂರು ವರ್ಷದಿಂದ ಕ್ಷೇತ್ರಾದ್ಯಂತ ಮನೆ- ಮನೆಗೆ ಭೇಟಿ ನೀಡಿ ತಾವು ಪ್ರಚಾರ ನಡೆಸಿದ್ದಾಗ್ಯೂ ಮತದಾರರು ಜೆಡಿಎಸ್ ಅಭ್ಯರ್ಥಿಗೆ ಭಾರಿ ಮುನ್ನಡೆ ನೀಡಿರುವುದು ಅರ್ಥವಾಗದ ಸಂಗತಿಯಾಗಿದೆ ಎಂದು ರಾಮನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ವಿಷಾದಿಸಿದ್ದಾರೆ.
ರಾಜಕೀಯದಲ್ಲಿ ಸೋಲು, ಗೆಲವು ಸಾಮಾನ್ಯ. ಈ ಬಾರಿ ಸೋಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಮತ್ತೆ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ದಕ್ಷ ಮತ್ತು ಪ್ರಾಮಾಣಿಕ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಮುಂದಿನ ದಿನಗಳಲ್ಲಿ ಅವರು ಜನತೆ ಮೆಚ್ಚುವ ಆಡಳಿತ ನೀಡುವ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾಗ್ಯೂ ಸರ್ಕಾರದಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ತಾವು ಕೈ ಜೋಡಿಸುವುದಾಗಿ ಅವರು ಹೇಳಿದರು.
ಡಿಕೆಶಿ ಉಸ್ತುವಾರಿ: ಸಿದ್ದರಾಮಯ್ಯ ಸಂಪುಟಕ್ಕೆ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಸೇರ್ಪಡೆ ಖಚಿತವಾಗಿದ್ದು, ಜಿಲ್ಲೆಯ ಉಸ್ತುವಾರಿ ಹೊಣೆಯೂ ಅವರ ಹೆಗಲಿಗೆ ಬೀಳಲಿದೆ. ಹೀಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಿದ್ದಾಗ್ಯೂ ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ತಿಳಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಆದ ರಾಜಕೀಯ ಅನಿಶ್ಚಿತತೆ, ಬಿಜೆಪಿ ದುರಾಡಳಿತದಿಂದ ಬೇಸತ್ತ ಜನೆಗೆ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಜ್ಞಾವಂತಿಕೆ ಮೆರೆದಿದ್ದಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಕೆ.ರಮೇಶ್, ಜಯಣ್ಣ, ಪಿ.ನಾಗರಾಜು, ವೆಂಕಟೇಶ್, ಪುಟ್ಟರಾಜು, ದೊಡ್ಡವೀರೇಗೌಡ, ಕಾಂತರಾಜ್ ಪಟೇಲ್, ಸೌಭಾಗ್ಯಮ್ಮ, ವಿ.ಎಚ್. ರಾಜು, ಚೇತನ ಕುಮಾರ್, ನಿಜಾಂ, ಪ್ರಭು, ನಾಗಣ್ಣ, ವೆಂಕಟಸ್ವಾಮಿ ಇತರರಿದ್ದರು.