ಲೋಕಸಭಾ ಕ್ಷೇತ್ರಕ್ಕೆ ನಡೆದಿತೇ ಚುನಾವಣೆ?
ವಿಶೇಷ ವರದಿ
ಕ.ಪ್ರ.ವಾರ್ತೆ ರಾಮನಗರ ಮೇ11
ರಾಜ್ಯ ರಾಜಕಾರಣಕ್ಕೆ ಮರಳಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಸಂಸದ ಸ್ಥಾನಕ್ಕೆ ಮರು ಚುನಾವಣೆ ಸಾಧ್ಯಾಸಾಧ್ಯತೆ ಕುರಿತ ವಿಷಯ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ 28 ಲೋಕಸಭಾ ಸದಸ್ಯರ ಪೈಕಿ ವಿಧಾನಸಭೆಗೆ ಆಯ್ಕೆಗೊಂಡ ಇಬ್ಬರೂ ಜೆಡಿಎಸ್ ಪಕ್ಷದ ಆಪ್ತಮಿತ್ರರು. ಈ ಪೈಕಿ ಒಬ್ಬರು ಕುಮಾರಸ್ವಾಮಿ, ಮತ್ತೊಬ್ಬರು ನೆರೆಯ ಮಂಡ್ಯ ಕ್ಷೇತ್ರದ ಎನ್. ಚಲುವರಾಯಸ್ವಾಮಿ. ಇವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಇತ್ತು. ವಿಧಾನಸಭೆಗೆ ಆಯ್ಕೆಯಾಗಿರುವ ಅವರಿಬ್ಬರೂ ಈಗ ಸಂಸತ್ ಸ್ಥಾನ ತೊರೆಯುವುದು ಖಚಿತವಾಗಿದೆ.
50,50 ಚಾನ್ಸ್: ತೆರವಾಗುವ ಲೋಕಸಭಾ ಸದಸ್ಯ ಸ್ಥಾನಗಳಿಗೆ ಮರು ಚುನಾವಣೆ ಸಾಧ್ಯತೆ ಇದೆ ಮತ್ತು ಇಲ್ಲ ಎನ್ನುವ ಎರಡೂ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇಬ್ಬರೂ ಸಂಸದರು ರಾಜಿನಾಮೆ ಸಲ್ಲಿಸಿದರೆ ಶೀಘ್ರವೇ ಚುನಾವಣೆ ಘೋಷಣೆ ಆಗಬೇಕಿದೆ. ಆಯೋಗ ವಿಳಂಬ ಧೋರಣೆ ತಳೆದಲ್ಲಿ ಚುನಾವಣೆ ಇಲ್ಲವೆಂದೇ ಅರ್ಥ.
ಯಾವುದೇ ಚುನಾಯಿತ ಸರ್ಕಾರದ ಅವಧಿ ಆರು ತಿಂಗಳಿಗಿಂತ ಕಡಿಮೆ ಇದೆ ಎನ್ನುವ ಸಂದರ್ಭದಲ್ಲಿ ಮರು ಚುನಾವಣೆ ನಡೆಸುವ ಗೋಜಿಗೆ ಚುನಾವಣಾ ಆಯೋಗ ಯಾವ ಕಾರಣಕ್ಕೂ ಮುಂದಾಗದು.
ಹಾಲಿ ಲೋಕಸಭೆ ಅವಧಿ 4 ವರ್ಷ ಮುಗಿದಿದೆ. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದೆ. ಹೀಗಾಗಿ ಆಗಸ್ಟ್- ಸೆಪ್ಟಂಬರ್ ಒಳಗೆ ಚುನಾವಣೆ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಗಮನ ಕೇಂದ್ರೀಕೃತ: ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಅಲಂಕರಿಸಲು ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿತ್ತ ಈಗಾಗಲೇ ಲೋಕಸಭೆ ಚುನಾವಣೆಯತ್ತ ನೆಟ್ಟಿದೆ. ಬಹುಮುಖ್ಯವಾಗಿ ಅವರು ಹಳೆ ಮೈಸೂರು ಭಾಗದ ಎಲ್ಲ ಕ್ಷೇತ್ರಗಳು ಮತ್ತು ಉತ್ತರ ಕರ್ನಾಟಕದ ಸೀಮಿತ ಕ್ಷೇತ್ರಗಳಲ್ಲಿ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಒಂದೊಮ್ಮೆ ಮರು ಚುನಾವಣೆ ಎದುರಾದರೆ ಸ್ಪರ್ಧೆಯನ್ನು ಗಂಭೀರವಾಗಿಯೇ ಪರಿಗಣಿಸುವ ಕುರಿತು ಕುಮಾರಸ್ವಾಮಿ ಈಗಾಗಲೇ ಪಕ್ಷದ ವಲಯದಲ್ಲಿ ಮುನ್ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಮರ್ಥ ಹುರಿಯಾಳು ಹುಡುಕಾಟಕ್ಕೂ ಮುಂದಾಗಿದ್ದಾರೆನ್ನಲಾಗಿದೆ.
ಪರಾಜಿತರ ನಿರಾಕರಣೆ: ಬೆಂಗಳೂರು ಗ್ರಾಮಾಂತರಕ್ಕೆ ಹೋಲಿಸಿದರೆ ಮಂಡ್ಯದಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬರವಿಲ್ಲ. ಪ್ರಭಾವಿ ಶಾಸಕರಾಗಿದ್ದ ಮೇಲುಕೋಟೆಯ ಸಿ.ಎಸ್. ಪುಟ್ಟರಾಜು ಈ ಬಾರಿ ವಿಧಾನಸಭೆಯಲ್ಲಿ ಪರಾಭವಗೊಂಡಿದ್ದು, ಲೋಕಸಭೆ ಟಿಕೆಟ್ ರೇಸ್‌ನಲ್ಲಿ ಸಹಜವಾಗಿಯೇ ಮುಂಚೂಣಿಗೆ ನಿಲ್ಲಲಿದ್ದಾರೆ. ಕಳೆದ ಬಾರಿ ಚಲುವರಾಯಸ್ವಾಮಿ ಇದೇ ರೀತಿ ಮಾಡಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು 4 ಜಿಲ್ಲೆಗಳಲ್ಲಿ ಚಾಚಿಕೊಂಡಿದೆ. ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು, ತುಮಕೂರಿನ ಕುಣಿಗಲ್, ಬೆಂಗಳೂರು ಗ್ರಾಮಾಂತರದ ಆನೇಕಲ್, ಬೆಂಗಳೂರು ನಗರದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಈ ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಹೀಗಾಗಿ ಇಲ್ಲಿ ಜೆಡಿಎಸ್ ತನ್ನ ಅಧಿಪತ್ಯ ಉಳಿಸಿಕೊಳ್ಳಲು ಪ್ರಭಾವಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ.
ವಿಧಾನಸಭೆಯಲ್ಲಿ ಪರಾಭವಗೊಂಡಿರುವ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರಿಬ್ಬರೂ ಲೋಕಸಭೆ ಸ್ಪರ್ಧೆಗೆ ಇಳಿಯದಿರಲು ನಿರ್ಧರಿಸಿದ್ದಾರೆನ್ನಲಾಗಿದೆ. ಕಳೆದ ಬಾರಿ ತುಮಕೂರಿನಲ್ಲಿ ಕೆಲವೇ ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಮುದ್ದಹನುಮೇಗೌಡರ ಹೆಸರು ಈಗ ಇಲ್ಲಿ ಚಾಲ್ತಿಯಲ್ಲಿದೆ. ಇನ್ನೂ ಕೆಲವರು ರೇಸ್‌ನಲ್ಲಿದ್ದಾರೆ.