ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನರ್ತಿಸಿದ ಚಿಣ್ಣರು...
ಬೆಂಗಳೂರು: ಪ್ರತಿದಿನ ಮಕ್ಕಳ ಆಟ, ಹಿರಿಯರ ನಡಿಗೆ ಕಾಣಿಸುತ್ತಿದ್ದ ಮಕ್ಕಳು ಕಾಡು ಮನುಷ್ಯನ ವೇಷಧರಿಸಿ ಪುಟ್ಟ ಪುಟ್ಟ ಹೆಜ್ಜೆ ಹಾಕಿದರೆ, ಕೆಲವು ಹೆಣ್ಣು ಮಕ್ಕಳು ಸೀರೆ ಉಟ್ಟು ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಇದು ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಜರುಗಿದ ದೃಶ್ಯ. ಅಖಿಲ ಕರ್ನಾಟಕ ಮಕ್ಕಳ ಕೂಟ ಭಾನುವಾರ ಆಯೋಜಿಸಿದ್ದ 47ನೇ ಮಕ್ಕಳ ಬೇಸಿಗೆ ರಜೆಯ ಶಿಕ್ಷಣ ಹಾಗೂ ಮನರಂಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಸಮಾರಂಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಮಕ್ಕಳಕೂಟ ಅಧ್ಯಕ್ಷ ಟಿ.ವಿ. ಮಾರುತಿ, ಬೇಸಿಗೆ ಶಿಬಿರಗಳು ಮಕ್ಕಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಲು ಸಹಕಾರಿಯಾಗುತ್ತದೆ. ಈ ಶಿಬರದಲ್ಲಿ ಮಕ್ಕಳಿಗೆ ಅಬಾಕಸ್, ನೃತ್ಯ, ನಾಟಕ, ಜಿಮ್ನಾಸ್ಟಿಕ್ಸ್, ದೈಹಿಕ ಶಿಕ್ಷಣ, ಏರೋಬಿಕ್ಸ್ ಬಗ್ಗೆ ಒಂದು ತಿಂಗಳ ತರಬೇತಿ ನೀಡಿದ್ದೇವೆ. ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಮನೋವಿಕಾಸ ಉಂಟಾಗುತ್ತದೆ. ಅಲ್ಲದೆ, ಮಕ್ಕಳೆಲ್ಲರೂ ಒಟ್ಟಿಗೆ ಸೇರಿರುವುದರಿಂದ ಅವರಿಗೆ ನೂತನ ಸ್ನೇಹಿತರು ಸಿಗುತ್ತಾರೆ. ಇದರಿಂದ ಮಕ್ಕಳು ಉಲ್ಲಾಸಭರಿತದಿಂದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.