ರಾಜಕೀಯಕ್ಕೆ ಬೋರ್‌ವೆಲ್, ಪಂಪ್ ನಾಶ
ಕನ್ನಡಪ್ರಭ ವಾರ್ತೆ ಕನಕಪುರ ಮೇ 12
ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಎರಡು ಬೋರ್‌ವೆಲ್ ಹಾಗೂ ಪಂಪ್‌ಗಳನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ತಾಲೂಕು ತಟ್ಟೇಕೆರೆ ಸಮೀಪದ ಲೋಕನಾಯ್ಕನ ತಾಂಡಾದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಚುನಾವಣಾ ಫಲಿತಾಂಶ ಘೋಷಣೆಯಾದ ರಾತ್ರಿಯಂದು ಒಂದು ಪಕ್ಷಕ್ಕೆ ಸೇರಿದ ಗುಂಪು ಕುಡಿತದ ಅಮಲಿನಲ್ಲಿ ದಾಂಧಲೆ ನಡೆಸಿ ಬೋರ್‌ವೆಲ್‌ಹಾಗೂ ಪಂಪುಗಳನ್ನು ನಾಶಪಡಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜೆಡಿಎಸ್ ಪ್ರಾಬಲ್ಯದ ಗ್ರಾಮದಲ್ಲಿ, ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳಿಸಿರುವುದು ಈ ಕಿಡಿಗೇಡಿತನದ ಕೃತ್ಯಕ್ಕೆ ಕಾರಣ ಎಂದು ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ.
ಪದೇಪದೇ ನಡೆಯುತ್ತಿರುವ ಈ ಕಿಡಿಗೇಡಿಗಳ ಕೃತ್ಯದ ವಿರುದ್ಧ ತಾಲೂಕು ಆಡಳಿತ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.