ಸಾರಿಗೆ ಬಸ್ ಡಿಕ್ಕಿ; ಕಾರ್ಮಿಕ ಸಾವು
ರಾಮನಗರ: ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬನಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಹೊಸೂರುದೊಡ್ಡಿ ಗ್ರಾಮದ ಕಟ್ಟಡ ಕಾರ್ಮಿಕ ಶಿವಣ್ಣ(45) ಮೃತ ವ್ಯಕ್ತಿ. ಆತ ಚನ್ನಪಟ್ಟಣ ಕಡೆ ತೆರಳಲು ಸಂಜೆ 7 ಗಂಟೆಯಲ್ಲಿ ಆಟೋಗಾಗಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ಚಾಲಕನು ಬಸ್ ನಿಲ್ಲಿಸದೆ ಹೋಗಿದ್ದಾನೆ. ಸದರಿ ಬಸ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಮನಗರ ವಿಭಾಗಕ್ಕೆ ಸೇರಿದ್ದೆನ್ನಲಾಗಿದೆ. ಬಸ್ ಸಂಖ್ಯೆ ಗಮನಿಸಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.