ಅದ್ಧೂರಿ ಬಸವ ಜಯಂತಿ ಮೆರವಣಿಗೆ
ಕ.ಪ್ರ.ವಾರ್ತೆ ಆನೇಕಲ್ಲು ಮೇ 13
ತಾಲೂಕು ಬಸವ ಸಮಿತಿ ಟ್ರಸ್ಟ್ ಬಸವ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಿತು. ಪಟ್ಟಣದ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ, ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.
ನಾಗಸಂದ್ರ ಮಠದ ಸಿದ್ಧಲಿಂಗ ಸ್ವಾಮೀಜಿ, ಗುಮ್ಮಳಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಜಾಪುರದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿರವರು ಆಶೀರ್ವಚನ ನೀಡಿದರು.
ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಭಕ್ತ ಭಂಡಾರಿ ಬಸವಣ್ಣನವರು ಈ ಯುಗದ ಆದರ್ಶ ಪುರುಷ. ಭಾರತೀಯ ಧರ್ಮ ಸಂಸ್ಕೃತಿಯನ್ನು ಉಚ್ಛಾಯ ಸ್ಥಿತಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಲ್ಲ ಸಮುದಾಯದ ಜನ ಬಸವಣ್ಣನವರ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ವೀರಶೈವ ಸಮುದಾಯದ ಅಧ್ಯಕ್ಷ ಕಿರಣಣ ಪ್ರಕಾಶ್, ಯುವ ವೇದಿಕೆಯ ಅನ್ನದಾನಿ ನಟರಾಜು, ಜಗದೀಶ್, ಚಂದ್ರಶೇಖರ್, ಶಿವಣ್ಣ, ಸದಾನಂದ್ ಉತ್ಸವದ ಪ್ರಮುಖ ರೂವಾರಿಗಳಾಗಿದ್ದರು.
ಉತ್ಸವ: ಜಗಜ್ಯೋತಿ ಬಸವಣ್ಣನವರ ತೈಲ ಚಿತ್ರದ ಉತ್ಸವವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಜಾನಪದ ತಂಡಗಳಿಂದ ನಂದಿ ಧ್ವಜ, ವೀರಗಾಸೆ ಕುಣಿತ. ಪಟದ ಕುಣಿತ, ರುದ್ರ ನರ್ತನ ಸೇರಿದಂತೆ ವಿಶೇಷ ಪ್ರದರ್ಶನ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಹಸ್ರಾರು ಜನರು ಬಸವಣ್ಣನವರಿಗೆ ನಮನ ಸಲ್ಲಿಸಿದರು. ಭಕ್ತಾದಿಗಳು ಮನೆ ಮುಂದೆ ನೀರು ಚೆಲ್ಲಿ, ರಂಗೋಲಿ ಹಾಕಿ ಪೂಜೆ ಸಲ್ಲಿಸಿದರು.