ಆಧಾರ್ ಫೋಟೋಗೆ ಹಣ ವಸೂಲಿ
ಕ.ಪ್ರ. ವಾರ್ತ್ಣೆ ದೊಡ್ಡಬಳ್ಳಾಪುರ ಮೇ 13
ಪಟ್ಟಣದ ಖಾಸ್ಬಾಗ್ನ ಸರ್ಕಾರಿ ಶಾಲೆಯಲ್ಲಿ ಆಧಾರ್ ಚೀಟಿಗಾಗಿ ಭಾವಚಿತ್ರ ತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ರಮವಾಗಿ ನಾಗರಿಕರಿಂದ ಪ್ರತಿ ಕಾರ್ಡ್ಗೆ 100 ವಸೂಲಿ ಮಾಡಲಾಗುತ್ತಿತ್ತು. ಈ ಬಗ್ಗೆ ಆಕ್ರೋಶಿತರಾದ ಸಾರ್ವಜನಿಕರು ಮತ್ತು ಕರವೇ ಸಂಘಟನೆಯ ಕೆಲ ಮುಖಂಡರು ಸಿಬ್ಬಂದಿಗೆ ಛೀಮಾರಿ ಹಾಕಿರುವ ಘಟನೆ ಸೋಮವಾರ ನಡೆದಿದೆ.
ಬಡಾವಣೆಯ ಹಲವು ಮಂದಿ ಈಗಾಗಲೇ 100 ಕೊಟ್ಟು ಭಾವಚಿತ್ರ ತೆಗೆಸಿ ಮಾಹಿತಿ ನೀಡಿದ್ದರು. ಆದರೆ ನಾಗರಿಕರ ಆಕ್ರೋಶ ಮತ್ತು ಮಾಹಿತಿ ಕೇಳಿದ ನಂತರ ಕಕ್ಕಾಬಿಕ್ಕಿಯಾದ ಸಿಬ್ಬಂದಿ ತಮಗೆ ಸಂಬಳ ಕೊಡುವುದು ಕಡಿಮೆ. ಜತೆಗೆ ತಾವು ವಿದ್ಯಾರ್ಥಿಗಳಾಗಿದ್ದು, ಅರೆಕಾಲಿಕ ಕೆಲಸ ಮಾಡುತ್ತಿದ್ದೇವೆ ಎಂದು ಪರಿಪರಿಯಾಗಿ ಕೇಳಿಕೊಂಡ ನಂತರ ಅಕ್ರಮವಾಗಿ ಹಣ ಪಡೆಯದೆ, ಸರ್ಕಾರಿ ನಿಯಮಗಳಂತೆ ಆಧಾರ್ಕಾರ್ಡ್ ಮಾಹಿತಿ ಪಡೆಯುವುದು ಮತ್ತು ಭಾವಚಿತ್ರ ತೆಗೆಯುವ ಪ್ರಕ್ರಿಯೆ ನಡೆಸಬೇಕೆಂದು ಎಚ್ಚರಿಕೆ ನೀಡಲಾಯಿತು. ಕರವೇ ಉಪಾಧ್ಯಕ್ಷ ಬಷೀರ್, ಮುಖಂಡರಾದ ಪು.ಮಹೇಶ್, ರಾಜಘಟ್ಟ ರವಿ ಮತ್ತಿತರರು ಹಾಜರಿದ್ದರು.