ಬಸವಣ್ಣ ಮಹಾನ್ ಮಾನವತಾವಾದಿ
ಕ.ಪ್ರ.ವಾರ್ತೆ ರಾಮನಗರ ಮೇ 13
ಬಸವಣ್ಣ ಅವರು 9 ಶತಮಾನಗಳ ಹಿಂದೆಯೇ ಪ್ರಾಣಿ ಬಲಿ, ಮೂರ್ತಿ ಪೂಜೆ, ದೀನದಲಿತರ ಶೋಷಣೆ ವಿರುದ್ಧ ಹೋರಾಟ ನಡೆಸುವ ಜತೆಗೆ ಕಾಯಕ ತತ್ವವನ್ನು ಸಾರುವ ಮೂಲಕ ಜಗತ್ತು ಕಂಡ ಮಹಾನ್ ಮಾನವತಾವಾದಿ ಎನಿಸಿಕೊಂಡಿದ್ದಾರೆ ಎಂದು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿ.ಎಚ್.ರಾಜಶೇಖರ್ ಬಣ್ಣಿಸಿದರು.
ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು, ಆ ಕಾಲದಲ್ಲೇ ಸಮಾಜದಲ್ಲಿ ವೈಚಾರಿಕತೆ ಮತ್ತು ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಬಸವಣ್ಣ ಹೋರಾಟ ನಡೆಸಿದ್ದನ್ನು ಪ್ರಶಂಸಿಸಿದರು.
12ನೇ ಶತಮಾನದಲ್ಲೇ ಅಂತರ್ ಜಾತೀಯ ವಿವಾಹ, ಮೂಢ ನಂಬಿಕೆಗಳ ನಿವಾರಣೆ, ಗುಡಿ-ಗೋಪುರಗಳ ಬದಲು ದಲಿತರಿಗೆ ಮನೆ ಕಟ್ಟಿಕೊಡಬೇಕೆನ್ನುವ ನಿಟ್ಟಿನಲ್ಲಿ ಬಸವಣ್ಣ ನಡೆಸಿದ ಪ್ರಯತ್ನ ಅವಿಸ್ಮರಣೀಯ. ಜಾಗತಿಕ ಮಟ್ಟದಲ್ಲಿ ಇಂದಿಗೂ ಅವರ ಬಂಡಾಯ ಹೋರಾಟ ಅಚ್ಚಳಿಯದೆ ಉಳಿದಿದೆ ಎಂದು ಅವರು ಹೇಳಿದರು.
ಸ್ತ್ರೀಗೆ ಮನ್ನಣೆ: ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗುತ್ತಲೇ ಬಂದಿರುವ ಸ್ತ್ರೀಯರಿಗೆ ಮನ್ನಣೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಮೊದಲು ಧ್ವನಿ ಎತ್ತಿದವರೇ ಬಸವಣ್ಣ. ಸ್ತ್ರೀಯರನ್ನು ಸಾಮಾಜಿಕ ಕಟ್ಟುಪಾಡುಗಳಿಂದ ಹೊರತರಲು ಅವರು ಹೋರಾಡಿದ್ದು, ನಿಜವಾದ ಸ್ತ್ರೀ ಕುಲೋದ್ಧಾರಕ ಬಸವಣ್ಣನವರೇ ಎಂದು ರಾಜಶೇಖರ್ ತಿಳಿಸಿದರು.
ಅನುಭವ ಮಂಟಪವನ್ನು ಸ್ಥಾಪಿಸಿ, ತಳಮಟ್ಟದ ಸಮುದಾಯದವರು ತಮ್ಮ ಅನುಭವಗಳನ್ನು ನಿರ್ಭಯವಾಗಿ ಹಂಚಿಕೊಳ್ಳಲು ವೇದಿಕೆ ರೂಪಿಸಿದರು. ಅದರೊಂದಿಗೆ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಸುಖಿರಾಜ್ಯ ಸ್ಥಾಪನೆ ಮಾಡಿ ತೊರಿಸಿದ್ದರು. ಬದುಕಿಗೆ ಬೇಡವಾದುದನ್ನು ತಿರಸ್ಕರಿಸುವಂತೆ ಸಮಾಜಕ್ಕೆ ಕರೆ ನೀಡಿದ ಬಸವಣ್ಣ ಅವರ ಪರಿಶುದ್ಧ ಭಾವನೆ, ಸತ್ಯ, ಧರ್ಮ, ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಕರೆಯಿತ್ತರು.
ಶೋಷಿತರ ಧ್ವನಿ: ದಯೆ ಇಲ್ಲದ ಧರ್ಮ ಯಾವುದಯ್ಯಾ, ದಯೆಯೇ ಧರ್ಮದ ಮೂಲವಯ್ಯ ಎನ್ನುವ ವಚನವನ್ನು ಸಾರುವ ಮೂಲಕ ದಯೆಯಿಲ್ಲದ ಧರ್ಮವನ್ನು ತಿರಸ್ಕರಿಸುವಂತೆ ಶೋಷಿತ ಸಮುದಾಯಕ್ಕೆ ಕರೆ ನೀಡಿದ್ದರು. 9 ಶತಮಾನದ ಹಿಂದೆಯೇ ಬಸವಣ್ಣ ಅವರ ಕ್ರಾಂತಿಯ ಫಲವಾಗಿ ಅಂತರ್ ಜಾತಿ ವಿವಾಹ ನಡೆದಿವೆ. ಆದರೆ, ಕಂಪ್ಯೂಟರ್ ಯುಗವಾದ 21ನೇ ಶತಮಾನದಲ್ಲಿ ಮರ್ಯಾದಾ ಹತ್ಯೆ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ವಿಷಾದಿಸಿದರು.
ಕಳ್ಳತನ, ಕೊಲೆ, ಸುಲಿಗೆ, ಅಪಹಾಸ್ಯ, ಹೊಗಳಿಕೆ, ದೌರ್ಜನ್ಯ, ದಬ್ಬಾಳಿಕೆಯನ್ನು ಬಸವಣ್ಣ ಎಂದಿಗೂ ಒಪ್ಪಿರಲಿಲ್ಲ. ಪ್ರಸ್ತುತ ಸಮಾಜದ ಗತಿಯನ್ನು ಗಮನಿಸಿದರೆ, ಬಸವಣ್ಣ ಅವರ ತತ್ವ ಮತ್ತು ಆಶಯಗಳನ್ನು ನಾವು ಪಾಲಿಸುತ್ತಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಸ್ವಾಸ್ತ್ಯ ಸಮಾಜಕ್ಕಾಗಿ ಬಸವಣ್ಣ ಅವರ ತತ್ವಾದಾರ್ಶಗಳ ಪಾಲನೆ ಅಗತ್ಯ ಎಂದು ರಾಜಶೇಖರ್ ಕಿವಿಮಾತು ಹೇಳಿದರು.
ಸಿಬ್ಬಂದಿಗೆ ಸಲಹೆ: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವೃತ್ತಿಪರವಾಗಬೇಕಿದೆ. ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುವ ಜತೆಗೆ ಕನಿಷ್ಠ ಪ್ರಮಾಣದಲ್ಲಾದರೂ ಪ್ರಾಮಾಣಿಕತೆ ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಮಾತನಾಡಿದರು. ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಅವರು ಜ್ಯೋತಿ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ನಗರ ಸಭೆ ಅಯುಕ್ತ ಯಶವಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ್, ಉಪ ವಿಭಾಗಾಧಿಕಾರಿ ಡಾ. ರಾಜೇಂದ್ರಪ್ರಸಾದ್, ತಾ.ಪಂ. ಇಒ ನಾರಾಯಣಸ್ವಾಮಿ ಭಾಗವಹಿಸಿದ್ದರು.