ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯಾರಿಗೂ ಬೇಡವಾದ ಬಸವಣ್ಣ!

Rashmi Kasaragodu
Updated On : 14 May 2013, 12:44 pm

ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಕ್ರಾಂತಿಯೋಗಿ ಬಸವಣ್ಣ ಈ ನಾಡು ಕಂಡ ಶ್ರೇಷ್ಟ ಸಾಮಾಜಿಕ ಚಿಂತಕ. ಪಟ್ಟಭದ್ರ ಹಿತಾಸಕ್ತಿಯ, ಪುರೋಹಿತಶಾಹಿ ದಬ್ಬಾಳಿಕೆಯ ವಿರುದ್ಧ ದನಿಯೆತ್ತಿದ ಧೀಮಂತ. ಹೀಗಾಗಿ ರಾಜ್ಯ ಸರ್ಕಾರ ಬಸವ ಜಯಂತಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ. ವಾಸ್ತವವಾಗಿ ಇದು ನಾಡಿನ ಎಲ್ಲರೂ ಆಚರಿಸಬೇಕಾದ ದಿನಾಚರಣೆ. ಆದರೆ ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಬಸವಣ್ಣನನ್ನು ನಿರ್ಲಕ್ಷಿಸಲಾಗಿದೆ.
ಪ್ರತಿವರ್ಷ ತಾಲೂಕು ಆಡಳಿತದ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಈ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು. ಆದರೆ ಈ ಬಾರಿ ಮಾತ್ರ ಬಸವ ಜಯಂತಿ ಆಚರಣೆ ಅಧಿಕೃತವಾಗಿ ನಡೆದೇ ಇಲ್ಲ. ಔಪಚಾರಿಕವಾಗಿ ತಾಲೂಕು ಕಚೇರಿಯ ಒಂದಿಬ್ಬರು ಸಿಬ್ಬಂದಿ ಬಸವಣ್ಣನ ಭಾವಚಿತ್ರಕ್ಕೆ ಹೂ ಹಾಕಿ, ಪೂಜಿಸಿ ಅಷ್ಟಕ್ಕೆ ಆಚರಣೆಯನ್ನು ಮುಗಿಸಿದ್ದಾರೆ.
ಗೈರು ಹಾಜರಿ: ತಾಲೂಕಿನ ದಂಡಾಧಿಕಾರಿಗಳಾಗಲೀ, ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ಅಧಿಕಾರಿಗಳಾಗಲೀ ಈ ಸಂದರ್ಭದಲ್ಲಿ ಹಾಜರಿರಲಿಲ್ಲ.
ಎಂದಿನಂತೆ ಬಸವ ಜಯಂತ್ಯುತ್ಸವ ಆಚರಣೆ ಇರಬೇಕು ಎಂದು ತಾಲೂಕು ಕಚೇರಿಗೆ ತೆರಳಿದ ಕೆಲ ಸಂಘಟನೆಗಳ ಮುಖಂಡರಿಗೆ ಅಚ್ಚರಿ ಕಾದಿತ್ತು. ತಾಲೂಕು ಕಚೇರಿಯಲ್ಲಿ ಒಂದಿಬ್ಬರು ಸಿಬ್ಬಂದಿ ಬಿಟ್ಟರೆ ಬೇರಾರೂ ಇರಲಿಲ್ಲ. ಜತೆಗೆ ನೆಪಮಾತ್ರದ ಆಚರಣೆಗಷ್ಟೇ ಸೀಮಿತವಾಗಿಸಲಾಗಿತ್ತು. ಈ ಬಗ್ಗೆ ಕೆಲ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಚುನಾವಣೆ ಕರ್ತವ್ಯ ಮುಗಿದು ಇನ್ನೂ 4 ದಿನಗಳು ಮಾತ್ರ ಕಳೆದಿವೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಲೂ ಸಾಧ್ಯವಾಗಿಲ್ಲ. ಜಯಂತ್ಯುತ್ಸವ ಆಚರಿಸಲೂ ಸಾಧ್ಯವಾಗಿಲ್ಲ ಎಂಬ ಸ್ಪಷ್ಟನೆ ಬಂತು ಎನ್ನುತ್ತಾರೆ ಎಂದು ಸಂಘಟನೆಗಳ ಮುಖಂಡರು ಕಿಡಿ ಕಾರುತ್ತಾರೆ.
ಆದರೆ ಈ ಬಗ್ಗೆ ಮೊದಲೇ ಸಾರ್ವಜನಿಕರ ಗಮನಕ್ಕೆ ತರುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಅಲ್ಲದೆ ತಾಲೂಕು ಕಚೇರಿಯಲ್ಲಿ ನಡೆದ ಸಾಂಕೇತಿಕ ಆಚರಣೆಯಲ್ಲಾದರೂ ಅಧಿಕಾರಿಗಳು ಭಾಗವಹಿಸಬಹುದಿತ್ತು ಎಂಬ ವಾದವನ್ನಂತೂ ತಳ್ಳಿಹಾಕುವಂತಿಲ್ಲ.
ಜಾಣ ಮರೆವು: ಇನ್ನು ಚುನಾವಣೆಗೆ ಮುನ್ನ ಸಣ್ಣಪುಟ್ಟ ಜಯಂತ್ಯುತ್ಸವಗಳನ್ನೂ ಆಚರಿಸಿ, ಅದ್ದೂರಿ ಪ್ರಚಾರ ಮಾಡುತ್ತಿದ್ದ ಬಹುತೇಕ ರಾಜಕೀಯ ಪಕ್ಷಗಳು ಚುನಾವಣೋತ್ತರದಲ್ಲಿ ಧೋರಣೆ ಬದಲಿಸಿವೆ.
ಯಾವ ರಾಜಕೀಯ ಪಕ್ಷವೂ ಅಧಿಕೃತವಾಗಿ ಬಸವ ಜಯಂತಿ ಆಚರಣೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ದೊಡ್ಡಬಳ್ಳಾಪುರ ನಗರದಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಧಿಕೃತ ಕಚೇರಿಗಳನ್ನು ಹೊಂದಿವೆ. ಕಚೇರಿಗಳಲ್ಲಾದರೂ ಔಪಚಾರಿಕ ಆಚರಣೆ ಮಾಡಬಹುದಾಗಿತ್ತು. ಆದರೆ ಸೋತ ರಾಜಕೀಯ ಪಕ್ಷಗಳು ಆತ್ಮಾವಲೋಕನದಲ್ಲಿ ಮುಳುಗಿದ್ದರೆ, ಗೆದ್ದವರು ಸಂಭ್ರಮದಲ್ಲಿ ಮಾಡಬೇಕಾದ ಸೂಕ್ಷ್ಮತರ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ ಎಂಬುದು ಜನರ ಅಭಿಪ್ರಾಯ.
ಚುನಾವಣೆ ಎಫೆಕ್ಟ್: ರಾಜ್ಯದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಚುನಾವಣೆ ಗುಂಗು ಇನ್ನೂ ಹೋಗಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಪ್ರತಿ ಮಹಾಪುರುಷನ ಜನ್ಮದಿನಾಚರಣೆ, ಸ್ಮರಣೆಯಲ್ಲೂ ರಾಜಕೀಯ ಲೆಕ್ಕಾಚಾರದ ಜಾಣತನ ಮೆರೆಯುವ ಜನ ತದನಂತರದಲ್ಲಿ ಹೊಣೆಗಾರಿಕೆಯನ್ನು ಮರೆಯುವುದು ವ್ಯವಸ್ಥೆಯ ಅಣಕ.
ಪ್ರತಿವರ್ಷ ಅದ್ದೂರಿಯಾಗಿ ಆಚರಿಸಲ್ಪಡುತ್ತಿದ್ದ ಬಸವ ಜಯಂತಿ ಈ ಬಾರಿ ಕನಿಷ್ಠ ಸೌಜನ್ಯಕ್ಕಾದರೂ ಆಚರಣೆಗೆ ಬಾರದಿರುವುದು ವಿಷಾದನೀಯ. ವೋಟ್‌ಬ್ಯಾಂಕ್‌ಗಳಿಗಾಗಿ ಮಾಡುವ ಆಚರಣೆಗಳು ಹೇಗಿರುತ್ತವೆ, ನೈಜ ಅರ್ಥದಲ್ಲಿ ಇರುವ ಆಚರಣೆಗಳ ಪರಿಕಲ್ಪನೆ ಎಂತಹುದು ಎಂಬುದಕ್ಕೆ ಈ ಬಾರಿಯ ಬಸವ ಜಯಂತಿ ನಿದರ್ಶನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement