ಸಿದ್ದು ಸಿಎಂ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ನೆಲಮಂಗಲ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದಂತೆ ತಾಲೂಕಿನ ಸೋಂಪುರ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ದಾಬಸ್ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಜಯಘೋಷ ಹಾಕಿದರು.
ಪಕ್ಷದ ಯುವ ಮುಖಂಡ ಅಗಳಕುಪ್ಪೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗೋವಿಂದರಾಜು ಮಾತನಾಡುತ್ತಾ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮತ್ತು ಸಿದ್ದರಾಮಯ್ಯ ಅವರ ದೂರ ದೃಷ್ಟಿ ವ್ಯಕ್ತಿತ್ವದಿಂದ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನಮ್ಮ ಪಕ್ಷದ ಮುಖಂಡರು ಮುಂದೆ ನಿಂತು ಆಯೋಜಿಸಬೇಕಾಗುತ್ತದೆ ಎಂದರು.
ಮಾದೇನಹಳ್ಳಿ ನೀಲಕಂಠಪ್ಪ, ಕಸಬಾ ನಿಜಗಲ್ ಸಿದ್ದರಾಜು, ಲಕ್ಕೂರು ಖಲೀಂ ಪಾಷ, ಬರಗೇನಹಳ್ಳಿ ವಿಶ್ವನಾಥ್, ಹುರಿಯಪ್ಪನಪಾಳ್ಯದ ಹನುಮಂತರಾಜು, ಅಗಳಕುಪ್ಪೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಾಲ ಕೆಂಪರಾಜು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.