'ಆರೋಗ್ಯದ ಕಾಳಜಿ ಇರಲಿ'
ಕ.ಪ್ರ. ವಾರ್ತೆ , ನೆಲಮಂಗಲ , ಮೇ 14
ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಜನತೆಯ ಆರೋಗ್ಯದ ಅರಿವಿನ ಕಾಳಜಿ ಹೊಂದುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪುರಸಭಾ ಸದಸ್ಯ ಶಿವಕುಮಾರ್ ಹೇಳಿದರು.
ಅವರು ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ಮುನಿಯಮ್ಮ ಓಬಳಯ್ಯ ವಿದ್ಯಾವಾಹಿನಿ ಸಂಸ್ಥೆ ಹಾಗೂ ಪುರಸಭೆ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧಿ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಹಿರಿಯರು ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸುತ್ತಿದ್ದರಿಂದ ಬಲಾಢ್ಯರಾಗಿ ಇರುತ್ತಿದ್ದರು. ಜಾಗತೀಕರಣ ಮತ್ತು ತಾಂತ್ರಿಕತೆಯಿಂದಾಗಿ ರಾಸಾಯನಿಕಗಳನ್ನು ಬಳಸಿ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿದ್ದು ಹೈಬ್ರಿಡ್ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಕಂಡುಬರುತ್ತಿವೆ. ಇದರಿಂದ ನಮ್ಮಲ್ಲಿ ರೋಗ ನಿರೋಧಕತೆ ಕುಂಠಿತವಾಗುತ್ತಿದೆ. ಸಣ್ಣಪುಟ್ಟ ಕಾಯಿಲೆಗಳು ಬಹುಬೇಗನೆ ಉಲ್ಬಣಿಸುವುದರಿಂದ ತಾವುಗಳು ಆರೊಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯವೊಂದಿದ್ದರೆ ಎಂತಹ ಸಾಧನೆ ಬೇಕಾದರು ಮಾಡಬಹುದು ಎಂದರು.
ಶಿಬಿರದಲ್ಲಿ ನೂರಾರು ಜನ ತಪಾಸಣೆಗೆ ಒಳಗಾಗಿದ್ದರು. ಪುರಸಭಾ ಸದಸ್ಯರಾದ ಆಂಜಿನಪ್ಪ, ಕಾರ್ಯದರ್ಶಿ ಕೆ.ಓ.ಮಹೇಶ್, ಡಾ.ಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಶತ್ ಅಧ್ಯಕ್ಷ ಎನ್.ರಾಜಶೇಖರ್, ಎಲ್ಲೇಗೌಡ ಇದ್ದರು.