ದಮನಿತ ವರ್ಗಕ್ಕೆ ಸಮಾನತೆ ತಂದ ಕ್ರಾಂತಿಯೋಗಿ ಬಸವಣ್ಣ
ಕ.ಪ್ರ. ವಾರ್ತೆ , ಕನಕಪುರ , ಮೇ 14
ಮೂಢನಂಬಿಕೆಗಳೇ ತಾಂಡವವಾಡುತ್ತಿದ್ದ ಕಾಲದಲ್ಲಿ ದಲಿತ ಹಾಗೂ ದಮನಿತ ವರ್ಗಕ್ಕೆ ಸಮಾನತೆಯನ್ನು ಕಲ್ಪಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆ ಮಾಡಿದ ಭಕ್ತಿಭಂಡಾರಿ ಬಸವಣ್ಣನವರು ಇಡೀ ಮನುಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಮರಳೇಗವಿಮಠದ ಮುಮ್ಮಡಿ ಶಿವರುದ್ರಸ್ವಾಮೀಜಿ ಹೇಳಿದ್ದಾರೆ.
ಅವರು ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾಸಮಿತಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇಗುಲಮಠದ ಮುಮ್ಮಡಿ ಮಹಾಲಿಂಗಸ್ವಾಮೀಜಿ ಮಾತನಾಡುತ್ತಾ, ಬಸವಣ್ಣನವರ ತತ್ವಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು , ಭಕ್ತಿ, ಜ್ಞಾನ, ವೈರಾಗ್ಯಗಳೊಂದಿಗೆ ಕಾಯಕತತ್ವ, ಅಸಂಗ್ರಹ, ಅಪರಿಗ್ರಹ, ಸಮಾನತೆಗಳನ್ನು ಎಲ್ಲರಿಗೂ ಬೋಧಿಸಿದ ಮಹಾನ್ಚೇತನವಾಗಿದ್ದರು ಎಂದು ಹೇಳಿದರು.
ಮಹಿಳೆಯರಿಗೂ ಸಮಾನತೆಯನ್ನು ತಂದುಕೊಟ್ಟು ಜನಸಾಮಾನ್ಯರ ಆಡುಮಾತಿನ ವಚನಗಳ ಮೂಲಕ ಮಹಾನ್ಕ್ರಾಂತಿ ಮಾಡಿದವರು ಬಸವಣ್ಣನವರು ಎಂದು ಶ್ರೀಗಳು ನುಡಿದರು.
ಕಾರ್ಯಕ್ರಮದ ಅಂಗವಾಗಿ ಆಕಾಶವಾಣಿ, ದೂರದರ್ಶನ ಕಲಾವಿದರಾದ ಬೀನಾಬಾದಾಮಿ, ಆಕಾಂಕ್ಷಾ ಬಾದಾಮಿ ತಂಡದವರಿಂದ ಬಸವ ವಚನ ಗಾಯನ ಕಾರ್ಯಕ್ರಮ ನೆರೆದ ಸಾವಿರಾರು ಜನರ ಮನಸೂರೆಗೊಂಡಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಬಸವರಾಜು, ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ, ವೀರಶೈವ ಮುಖಂಡರುಗಳಾದ ಕೈಲಾಸಶಂಕರ್, ಮಹೇಶ್, ಡಾ.ಮಂಜುನಾಥ್, ಶೆಟ್ಟಿ ಮಂಜು ಪಾಲ್ಗೊಂಡಿದ್ದರು.