ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಣ ಸಂಸ್ಥೆಗಳ ಡೊನೇಷನ್ ಮಾಫಿಯಾ

Vishwanath S
Updated On : 15 May 2013, 12:24 pm

ರಾಮನಗರ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಪಿಡುಗಿಗೆ ಕೊನೆ ಇಲ್ಲದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೊನೇಷನ್‌ನಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು ಪೋಷಕರ ಸುಲಿಗೆಗೆ ಇಳಿದಿವೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆಯನ್ನೂ ಮೀರಿಸುವ ಮಟ್ಟಕ್ಕೆ ಶಿಕ್ಷಣ ಸಂಸ್ಥೆಗಳ ಮಾಫಿಯಾ ತನ್ನ ಕಬಂಧಬಾಹು ಚಾಚಿದೆ.
ರಾಜಾರೋಷ ದಂಧೆ: ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಂತೆಯೇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಿಂದ ಡೊನೇಷನ್, ಅಭಿವೃದ್ಧಿ ಶುಲ್ಕ, ಟ್ಯೂಷನ್ ಶುಲ್ಕ, ಸಮವಸ್ತ್ರ, ಪಠ್ಯ ಮತ್ತು ನೋಟ್ ಪುಸ್ತಕ ದರ, ಪ್ರಯಾಣ ದರದ ದೊಡ್ಡ ಪಟ್ಟಿಯನ್ನೇ ನೀಡಿ ಹೌಹಾರುವಂತೆ ಮಾಡಲಾಗುತ್ತಿದೆ. ರಾಜಾರೋಷವಾಗಿಯೇ ನಡೆಯುತ್ತಿರುವ ಈ ಪಿಡುಗಿನ ಬಗ್ಗೆ ಅಧಿಕಾರಿ, ಜನಪ್ರತಿನಿಧಿಗಳ ಗುಡುಗು ಇಲ್ಲದಾಗಿದೆ. ಆಂಗ್ಲ ಭಾಷಾ ವ್ಯಾಮೋಹಕ್ಕೆ ಬಿದ್ದ ಪೋಷಕರು ಖರ್ಚು ಎಷ್ಟಾದರೂ ಸರಿಯೇ ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಲ್ಲಿಯೇ ಓದಿಸಬೇಕೆಂಬ ಭ್ರಮೆಯಿಂದ ಹಣ ಚೆಲ್ಲುತ್ತಿದ್ದಾರೆ.
ಪೋಷಕರ ಸುಲಿಗೆ: ಬೆಂಗಳೂರು-ಕನಕಪುರ, ಮಾಗಡಿ-ಬೆಂಗಳೂರು ರಸ್ತೆಯಲ್ಲಿರುವ ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮಧ್ಯಮ ವರ್ಗದ ಮಕ್ಕಳು ಸುಳಿಯಲೂ ಆಗದ ಸ್ಥಿತಿ ಇದೆ. ಆ ಸಂಸ್ಥೆಗಳ ಅರ್ಜಿ ಶುಲ್ಕದಲ್ಲೇ ಸರ್ಕಾರಿ ಸಂಸ್ಥೆಗಳಲ್ಲಿ 1ನೇ ತರಗತಿಯಿಂದ ಪದವಿವರೆಗೆ ವ್ಯಾಸಂಗ ಮಾಡಿಸಬಹುದು.   ಕೈಗಾರಿಕಾ ಪ್ರದೇಶವಾಗಿರುವ ಬಿಡದಿ, ಹಾರೋಹಳ್ಳಿ, ಜಿಲ್ಲಾ ಕೇಂದ್ರ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿಯಂತಹ ಕಡೆಯೂ ಪೋಷಕರ ಸುಲಿಗೆ ಭಾರಿ ಮಟ್ಟದಲ್ಲೇ ನಡೆಯುತ್ತಿದೆ. ಗ್ರಾಮೀಣ ಭಾಗದ ಸಂಸ್ಥೆಗಳಲ್ಲೂ ಡೊನೇಷನ್ ಹಾವಳಿ ತಪ್ಪಿಲ್ಲ.
ನಿಯಮ ಪಾಲಿಸಿಲ್ಲ: ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅನುಮತಿ ಪಡೆಯಲು ಸರ್ಕಾರ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಸುಸಜ್ಜಿತ ಕಟ್ಟಡ, ಆಟದ ಮೈದಾನ, ಶೌಚಾಲಯ, ವಾಚನಾಲಯ ಸಹಿತ ಮೂಲಭೂತ ಸೌಲಭ್ಯಗಳಿಲ್ಲದ ಶಾಲೆಗಳೇ ಈ ಜಿಲ್ಲೆಯಲ್ಲಿ ಅಧಿಕವಾಗಿವೆ.
ಅನುಮತಿ ನೀಡುವಾಗ ಪರಿಶೀಲನೆಗೆ ಬರುವ ಅಧಿಕಾರಿಗಳು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ಎಸೆಯುವ ಎಂಜಿಲು ಕಾಸಿನ ಆಸೆಗಾಗಿ ಕಣ್ಮುಚ್ಚಿ ಸಹಿ ಮಾಡಿ ಹೋಗಿರುತ್ತಾರೆ. ಹತ್ತಾರು ವರ್ಷ ಕಳೆದರೂ ಷರತ್ತು ಕನಿಷ್ಠ ಅರ್ಧದಷ್ಟು ಷರತ್ತುಗಳನ್ನೂ ಪೂರೈಸದ ಸಂಸ್ಥೆಗಳಿವೆ.
ಖರೀದಿಗೂ ಕಡ್ಡಾಯ: ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡೊನೇಷನ್ ಅಷ್ಟೇ ಅಲ್ಲದೆ ಶಾಲಾಭಿವೃದ್ಧಿ ಶುಲ್ಕವೂ ಕಡ್ಡಾಯ. ಇಷ್ಟು ಸಾಲದೆನ್ನುವಂತೆ ಸಮವಸ್ತ್ರ, ಪಠ್ಯ ಪುಸ್ತಕ, ನೋಟ್ ಪುಸ್ತಕ, ಬ್ಯಾಗ್ ಸಹಿತ ಬಹುಪಾಲು ವಸ್ತುಗಳನ್ನು ಸದರಿ ಸಂಸ್ಥೆಯಲ್ಲೇ ಖರೀದಿಸಬೇಕೆನ್ನುವ ಅಘೋಷಿತ ಕಾಯ್ದೆಯೂ ಉಂಟು.
ಸಾಕಷ್ಟು ಸಂಸ್ಥೆಯವರು ಗುಜರಿ ಸೇರಬೇಕಾದ ವಾಹನಗಳನ್ನು ಖರೀದಿಸಿ, ಮಕ್ಕಳನ್ನು ಕರೆತರಲು ಏರ್ಪಾಟು ಮಾಡಿಕೊಂಡಿವೆ. ಡೀಸೆಲ್ ದರ ಹೆಚ್ಚಳದ ನೆಪವೊಡ್ಡಿ ಈ ಬಾರಿ ಸಾರಿಗೆ ಶುಲ್ಕವನ್ನೂ ಹೆಚ್ಚಳ ಮಾಡಿಕೊಳ್ಳಲಾಗಿದೆ.
ಪ್ರವೇಶ ಪರೀಕ್ಷೆ: ಮಕ್ಕಳನ್ನು ಪೂರ್ವ ಪ್ರಾಥಮಿಕ ಸಹಿತ ಯಾವುದೇ ತರಗತಿ ದಾಖಲಿಸಬೇಕಾದರೂ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಆಧರಿಸಿಯೇ ಆಯ್ಕೆ ಮಾಡಿಕೊಂಡು, ಫಲಿತಾಂಶ ಬಂದಾಗ ಶೇಕಡ ನೂರರಷ್ಟು ತೇರ್ಗಡೆ ಎಂದು ಬೀಗುತ್ತಿವೆ.
ಕೆಲ ಸಂಸ್ಥೆಗಳಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ಪೋಷಕರಿಗೂ ಸಂದರ್ಶನ ತಪ್ಪಿದ್ದಲ್ಲ. ಪೋಷಕರಿಗೆ ಇಂಗ್ಲಿಷ್ ಜ್ಞಾನ ಇರಲೇಬೇಕು. ಕರಾರಿಗೂ ಸಹಿ ಮಾಡಬೇಕು. ಮಕ್ಕಳು ಶಾಲೆಯಲ್ಲಿ ಇಂಗ್ಲಿಷ್ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲೂ ಮಾತನಾಡುವಂತಿಲ್ಲ. ಹಾಗೊಮ್ಮೆ ಮಾತನಾಡಿದರೆ ದಂಡ ತೆತ್ತಬೇಕಿದೆ.
ಶಿಕ್ಷಕರಿಗೆ ವಂಚನೆ: ಪೋಷಕರನ್ನು ಮನಸೋಯಿಚ್ಚೆ ಸುಲಿಯುವ ಶಿಕ್ಷಣ ಸಂಸ್ಥೆಯವರು ತಮ್ಮಲ್ಲಿ ದುಡಿಯುವ ಶಿಕ್ಷಕರು, ಬೋಧಕೇತರ ವರ್ಗಕ್ಕೆ ಮಾತ್ರ ಕೈತುಂಬ ಸಂಬಳ ನೀಡುತ್ತಿಲ್ಲ. ಈ ಪರಿಣಾಮ ಉತ್ತಮ ಶಿಕ್ಷಕರು ವರ್ಷದಿಂದ ವರ್ಷಕ್ಕೆ ಶಾಲೆಗಳನ್ನು ಬದಲಿಸುತ್ತಲೇ ಇದ್ದಾರೆ.
ಹೊರ ರಾಜ್ಯದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೆಲ ಸಂಸ್ಥೆಗಳು ಗಿಮಿಕ್ ಮಾಡುತ್ತಿವೆ.  ನಮ್ಮ ಭಾಷೆ, ಸಂಸೃತಿಯ ಬಗ್ಗೆ ಪರಿವೆಯೇ ಇಲ್ಲದ ಶಿಕ್ಷಕರ ಬಳಿ ಕಲಿಯುವ ಮಕ್ಕಳು ಪುಸ್ತಕದ ಹುಳುಗಳಾಗುತ್ತಿದ್ದಾರಷ್ಟೇ. ಬಹುತೇಕ ಶಾಲೆಗಳಲ್ಲಿ ಕನ್ನಡ ಕಲಿಗೆ ಒತ್ತು ನೀಡದ ಆರೋಪವಿದೆ.
ತೆಪ್ಪಗಿರುವ ಅಧಿಕಾರಿಗಳು: ಸುಲಿಗೆಗೆ ಇಳಿದ ಬಹುತೇಕ ಶಿಕ್ಷಣ ಸಂಸ್ಥೆಗಳು ಖಾಸಗಿ ಒಡೆತನದವು. ಡೊನೇಷನ್ ಹಾವಳಿ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇದ್ದೇ ಇದೆ. ಒಂದೊಮ್ಮೆ ಮಾಹಿತಿ ಇಲ್ಲವೆಂದಾದರೆ ಸದರಿ ಅಧಿಕಾರಿ ಕಚೇರಿ ಬಿಟ್ಟು ಹೊರಗೆಲ್ಲೂ ಹೋಗುತ್ತಿಲ್ಲವೆಂದೇ ಅರ್ಥ.
ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ಬಗ್ಗೆ ಪ್ರಶ್ನಿಸಿದರೆ, ತಮಗೆ ರಶೀದಿ ಸಮೇತ ದೂರು ಕೊಡಿ ಎನ್ನುವ ಸಿದ್ಧ ಉತ್ತರವನ್ನು ನೀಡುತ್ತಾರೆ. ಗಣಿ ಲೂಟಿ, ಭೂ ಮಾಫಿಯಾದಂತೆಯೇ ಹಣ ಮಾಡುವ ದಂಧೆಯಾಗಿ ಶೈಕ್ಷಣಿಕ ವ್ಯವಸ್ಥೆ ಬೆಳೆದಿದೆ. ಇದಕ್ಕೆ ಕೊನೆ ಹಾಡುವವರೆ ಇಲ್ಲದಂತಾಗಿದೆ.

ಡೊನೇಷನ್ ಮಿತಿ ನಿಗದಿ
ಹಿಂದಿನ ವರ್ಷದಲ್ಲಿ ಶಿಕ್ಷಕರಿಗೆ ನೀಡಲಾದ ಒಟ್ಟಾರೆ ವೇತನವನ್ನು ಅವಲಂಬಿಸಿ ಶಿಕ್ಷಣ ಸಂಸ್ಥೆಯು ಪ್ರತಿ ಬಾರಿ ಬಜೆಟ್ ನಿಗದಿಪಡಿಸಬೇಕಿದೆ. ಅದಕ್ಕೆ ಶೇಕಡ 30ರಷ್ಟು ಆಡಳಿತ ವೆಚ್ಚ ಸೇರ್ಪಡೆ ಮಾಡಿಕೊಳ್ಳಬಹುದು. ಒಟ್ಟಾರೆ ಮೊತ್ತವನ್ನು ಮಕ್ಕಳ ಸಂಖ್ಯೆಯಿಂದ ವಿಭಜಿಸಿದಾಗ ಬರುವಷ್ಟನ್ನು ಡೊನೇಷನ್ ರೂಪದಲ್ಲಿ ಪಡೆಯಲು ಅವಕಾಶವಿದೆ.  ಅಂತೆಯೇ ಅನುದಾನಿತ ಸಂಸ್ಥೆಗಳು ರು.500 ಮತ್ತು ಅನುದಾನ ರಹಿತ ಸಂಸ್ಥೆಗಳು ರು.600 ಶಾಲಾಭಿವೃದ್ಧಿ ಶುಲ್ಕ ತೆಗೆದುಕೊಳ್ಳಬಹುದು. ಆದರೆ, ಶಿಕ್ಷಣ ಸಂಸ್ಥೆಗಳು ಇದ್ಯಾವ ನಿಯಮಗಳನ್ನೂ ಪಾಲಿಸುತ್ತಿಲ್ಲ. ಸಂಸ್ಥೆಯು ಸ್ವಯಂ ನಿಗದಿಪಡಿಸಿದಷ್ಟು ಡೊನೇಷನ್ ಪಾವತಿಸದೆ ಪೋಷಕರಿಗೆ ಅನ್ಯ ಮಾರ್ಗವೇ ಇಲ್ಲ. ಡೊನೇಷನ್ ಸಂದಾಯ ಮಾಡಿದರೂ ವರ್ಷದ ಎಲ್ಲ 12 ತಿಂಗಳು ಮಾಸಿಕ ಟ್ಯೂಷನ್ ಫೀ ದಂಡ ತೆರಬೇಕಿದೆ.

ನಿಗದಿಗಿಂತ ಅಧಿಕ ಮೊತ್ತದ ಡೊನೇಷನ್ ಮತ್ತು ಅಭಿವೃದ್ಧಿ ಶುಲ್ಕ ಪಾವತಿಸಿದ ಬಗ್ಗೆ ಇಲ್ಲಿವರೆಗೆ ಇಲಾಖೆಗೆ ಯಾವುದೇ ದೂರು ಬಂದಿಲ್ಲ. ಸಾರ್ವಜನಿಕರು ಹಣ ಪಾವತಿಸಿರುವ ರಶೀದಿ ಸಮೇತ ದೂರು ನೀಡಿದರೆ ಸಂಬಂಧಿಸಿದ ಸಂಸ್ಥೆಗೆ ನೊಟೀಸ್ ಜಾರಿಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಪ್ರಹ್ಲಾದಗೌಡ, ಡಿಡಿಪಿಐ, ರಾಮನಗರ.

-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement