ಸರ್ಕಾರಿ ಉದ್ಯೋಗ ಬದಲು ಸ್ವಾವಲಂಬನೆ ವೃತ್ತಿ ಮಾಡಿ
ಸೂಲಿಬೆಲೆ: ಟೈಲರಿಂಗ್ ತರಬೇತಿ ಪಡೆದ ಗ್ರಾಮೀಣ ಭಾಗದ ಮಹಿಳೆಯರಿಗೆ ಗಾರ್ಮೆಂಟ್ ಮತ್ತು ಪ್ಯಾಷನ್ ಕ್ಷೇತ್ರದಲ್ಲಿ ಅನೇಕ ಉದ್ಯೋಗವಕಾಶಗಳಿವೆ. ಪ್ರತಿಯೊಬ್ಬರು ಸರ್ಕಾರಿ ಉದ್ಯೋಗ ಬಯಸುವ ಬದಲು ಸ್ವಾವಲಂಬನೆ ವೃತ್ತಿ ಜೀವನಕ್ಕೆ ಕೌಶಲ್ಯ ತರಬೇತಿಗಳನ್ನು ಪಡೆದು ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳಬೇಕು ಎಂದು ಸೊಣ್ಣಳ್ಳೀಪುರ ಕೆನರಾ ಬ್ಯಾಂಕ್ ಮೈಕ್ರೋ ಪೈನಾನ್ಸ್ ತರಬೇತಿ ಸಂಸ್ಥೆಯ ನಿರ್ದೇಶಕ ನರಸಿಂಹಲು ಹೇಳಿದರು. ಇಲ್ಲಿಗೆ ಸಮೀಪದ ಸೊಣ್ಣಳೀಪುರ ಗ್ರಾಮದಲ್ಲಿರುವ ತರಬೇತಿ ಸಂಸ್ಥೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆದ ಉಚಿತ ಟೈಲರಿಂಗ್ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗವಂತರಿಗೆ ಸಂಸ್ಥೆ ಕಳೆದ 15 ವರ್ಷಗಳಲ್ಲಿ ನೂರಾರು ತರಬೇತಿಗಳನ್ನು ನೀಡಿದೆ. ಬ್ಯಾಂಕ್ ಮೂಲಕ ಅಗತ್ಯ ಸಾಲ ಸೌಲಭ್ಯವನ್ನು ಕಲ್ಪಿಸುವ ಸಂಸ್ಥೆ ತರಬೇತಿ ಪಡೆದು ಹೋದ ಪ್ರತಿಯೊಬ್ಬರ ಜೀವನ ಮಟ್ಟದ ಸುಧಾರಣೆ ಗಮನಿಸುತ್ತಿದೆ ಎಂದರು. ಗ್ರಾಮಾಂತರ ಜಿಲ್ಲೆಯಿಂದ ಆಗಮಿಸಿದ್ದ 40 ಮಂದಿ ಶಿಬಿರಾರ್ಥಿಗಳು ಟೈಲರಿಂಗ್ ತರಬೇತಿ ಅನುಭವಗಳನ್ನು ಹಂಚಿಕೊಂಡರು. ಎಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಂಪಲನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿದರು. ಸಂಸ್ಥೆಯ ಸುಗುಣ, ನಾಗೇಶ್, ನಾರಾಯಣಮ್ಮ ಮೊದಲಾದವರು ಪಾಲ್ಗೊಂಡಿದ್ದರು.