ಹೊಸಕೋಟೆಯಲ್ಲಿ ನೀರು ಬಂದ್: ಜನರ ಹಾಹಾಕಾರ
ಹೊಸಕೋಟೆ: ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಚುನಾವಣೆ ನಂತರ ನಿಲುಗಡೆಯಾಗಿದ್ದು, ನಾಗರಿಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಾರದಲ್ಲಿ ಎರಡು ಬಾರಿ ಮನೆ ಮನೆಗೂ ವಿಚಾರಿಸಿ ಉಚಿತ ನೀರು ಸರಬರಾಜು ಮಾಡುತ್ತಿದ್ದ ರಾಜಕೀಯ ಪಕ್ಷಗಳವರು ಕಾಣೆಯಾಗಿದ್ದಾರೆ. ಖಾಸಗಿ ಟ್ಯಾಂಕರ್ಗಳಿಗೂ ಬೇಡಿಕೆ ಹೆಚ್ಚಾಗಿದ್ದು ಹಣ ನೀಡಿದರೂ 1-2 ದಿನಗಳು ಕಾಯಬೇಕಾಗುತ್ತಿದೆ. ಇನ್ನು ಪುರಸಭೆ ವತಿಯಿಂದ ಬಹಳಷ್ಟು ಪ್ರದೇಶಗಳಲ್ಲಿ 10 ದಿನಗಳಾದರು ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ವಿದ್ಯುತ್ ಸಮಸ್ಯೆ ಮುಂತಾದವುಗಳ ಸಬೂಬು ಹೇಳುವುದಕ್ಕಷ್ಟೆ ಅಧಿಕಾರಿಗಳು ಸೀಮಿತಗೊಂಡಿದ್ದಾರೆ. ಚುನಾಯಿತ ಜನಪ್ರತಿನಿಧಿಗಳಂತೂ ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಂತೆ ಕಂಡುಬರುತ್ತಿಲ್ಲ. ಈಗಲಾದರು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಪರಿಹರಿಸಲು ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಹೆಚ್ಚಿದ ವಿದ್ಯುತ್ ಕಣ್ಣಾಮುಚ್ಚಾಲೆ: ಚುನಾವಣೆ ನಂತರ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವ್ಯತ್ಯಯ ಉಂಟಾಗುತ್ತಿದೆ. ಕೇವಲ ಒಂದೆರಡು ಗಂಟೆಗಳಿಗೆ ಸೀಮಿತಗೊಂಡಿದ್ದ ಕಡಿತ ಈಗ ಸುಮಾರು ನಾಲ್ಕು ಗಂಟೆಗಳವರೆಗೂ ವಿಸ್ತಾರಗೊಂಡಿದೆ.