ಕಡವೆ ಕೊಂದು ಕತ್ತರಿಸಲು ಯತ್ನ; ಅರಣ್ಯ ಸಿಬ್ಬಂದಿಯಿಂದ ಒಬ್ಬ ಬಂಧನ
ರಾಮನಗರ: ಕನಕಪುರ ತಾಲೂಕಿನ ಕೋಡಿಹಳ್ಳಿ ಮುನೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ ಕೊಂದು ಚರ್ಮ ಸುಲಿದು, ಮಾರಾಟಕ್ಕೆ ಮಾಂಸ ಕತ್ತರಿಸಲು ಮುಂದಾಗಿದ್ದವರನ್ನು ಬುಧವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.
ನಾಲ್ಕು ಮಂದಿ ಆರೋಪಿಗಳ ಪೈಕಿ ಚಿಕ್ಕಕೆಬ್ಬಳ್ಳಿಯ ಫಯಾಜ್(40) ಸಿಕ್ಕಿಬಿದ್ದಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಪರಾರಿಯಾದವರನ್ನು ಏಜಾಸ್ ಪಾಷ, ಕೆಂಪರಸನಾಯ್ಕ(ಪಾಪಣ್ಣ) ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ.
ಬಂಧಿತನಿಂದ ಕುಡುಗೋಲು, ಚಾಕು, ಹಗ್ಗ, ಟಿವಿಎಸ್ ಮೊಪೆಡ್ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಧೀಶರು ಆರೋಪಿ ಫಯಾಜ್‌ನನ್ನು ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ. ಅರಣ್ಯಾಧಿಕಾರಿಗಳು ತಲೆಮರೆಸಿಕೊಂಡ ಉಳಿದ 3ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಗನ್ನಾಥ್, ಸಿಬ್ಬಂದಿ ಚಂದ್ರ ನಾಯಕ್, ಶೇಖರ್, ವೆಂಕಟರಮಣ, ವಾಹಬ್, ಅರುಣ, ವಾಸು ಪಾಲ್ಗೊಂಡಿದ್ದರು.