ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕಳಂಕಿತರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಬೇಡ'

Vishwanath S
Updated On : 16 May 2013, 12:50 pm

ದೊಡ್ಡಬಳ್ಳಾಪುರ: ಬಿಜೆಪಿಯ ಕಳಂಕವನ್ನು ಕಂಡೇ ಜನ ಇವತ್ತು ಕಾಂಗ್ರೆಸ್ಗೆ ಆಶೀರ್ವದಿಸಿದ್ದಾರೆ. ಈ ಸಂದರ್ಭದಲ್ಲಿ ಗೆದ್ದ ಕಳಂಕಿತರು ಮಂತ್ರಿಮಂಡಲ ಸೇರ್ಪಡೆಗೆ ಪ್ರಯತ್ನಿಸುತ್ತಿರುವುದು ನಡೆಯುತ್ತಿದೆ. ಸ್ವಚ್ಛ ಮಂತ್ರಿ ಮಂಡಲದಿಂದ ಮಾತ್ರ ಸ್ವಚ್ಛ ಆಡಳಿತ ನೀಡಲು ಸಾಧ್ಯ ಎಂದು ಇಲ್ಲಿನ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಅಭಿಪ್ರಾಯಪಟ್ಟರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯರು, ಗೆಳೆಯರ ಬಳಗ ಮತ್ತು ಸಾರ್ವಜನಿಕರು, ರಾಜ್ಯದಲ್ಲಿ ಸ್ವಚ್ಛ ಆಡಳಿತಕ್ಕೆ ಮೊದಲು ಕಳಂಕಿತರನ್ನು ದೂರವಿಡಬೇಕು. ಅಂತಹವರಿಗೆ ಸ್ಥಾನ ನೀಡಿದರೆ ಜನಕ್ಕೆ ಮೋಸ ಮಾಡಿದಂತಾಗುತ್ತದೆ. ಕಾಂಗ್ರೆಸ್ ವರಿಷ್ಠರು ಕಳಂಕಿತರ ಒತ್ತಡಕ್ಕೆ ಮಣಿದು ಸಚಿವ ಸ್ಥಾನ ನೀಡಬಾರದು. ಜನರ ಅಭಿಪ್ರಾಯವನ್ನು ಕಾಂಗ್ರೆಸ್ ಗೌರವಿಸಬೇಕು. ಇಲ್ಲವಾದರೆ ಜನ ಸುಮ್ಮನೆ ಕೂರಲ್ಲ. ಕಳಂಕಿತರ ಮತ್ತು ಕಾಂಗ್ರೆಸ್ ವಿರುದ್ಧ ಜನ ಸಮರ ಸಾರುವ ಕಾಲ ದೂರವಿಲ್ಲ. ಈ ಸತ್ಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸ್ವಚ್ಛ ಮಂತ್ರಿ ಮಂಡಲ ರಚಿಸಲಿ ಎಂದು ಲೇಖಕ ಡಾ.ಎ.ಓ.ಆವಲಮೂರ್ತಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಡಿ.ಆರ್.ನಟರಾಜ್, ಎನ್.ಸಿ.ಲಕ್ಷ್ಮಿ, ಸಮಿತಿ ಸದಸ್ಯರು, ಗೆಳೆಯರ ಬಳಗದ ಕೇಶವಮೂರ್ತಿ, ಮೋಹನ್, ಮಂಜುನಾಥ್, ಎನ್.ಜಿ.ಪುಟ್ಟರಾಜು, ಮುನಿಶಾಮಿರಾವ್ ಮತ್ತಿತರು ಒತ್ತಾಯಿಸಿದ್ದಾರೆ.

ಹೊಲಿಗೆ ತರಬೇತಿ ಕೇಂದ್ರಕ್ಕೆ ಆಹ್ವಾನ
ರಾಮನಗರ: ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡೆಸುತ್ತಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಪ್ರಸಕ್ತ ಸಾಲಿಗೆ ಪ್ರವೇಶ ಮಾಡಿಕೊಳ್ಳಲು 7ನೇ ತರಗತಿ ತೇರ್ಗಡೆಯಾದ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಯನ್ನು ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿ ಅಥವಾ ರಾಯರದೊಡ್ಡಿಯಲ್ಲಿರುವ ಹೊಲಿಗೆ ತರಬೇತಿ ಕೇಂದ್ರದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ 5 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಮೇ 30ರ ಸಂಜೆ 5ರೊಳಗೆ ಮೇಲ್ಕಂಡ ಕಚೇರಿಗೆ ಸಲ್ಲಿಸಬೇಕು. ತರಬೇತಿ ವೇಳೆ ಮಾಹೆಯಾನ ರು. 300 ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ-1 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಹೊರತುಪಡಿಸಿ ಇತರೆ ಪ್ರವರ್ಗಗಳಿಗೆ ಸೇರಿದವರಿಗೆ ರು.15000 ವಾರ್ಷಿಕ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement