ಕಾಂಗ್ರೆಸ್ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
ಕ.ಪ್ರ.ವಾರ್ತೆ , ರಾಮನಗರ , ಮೇ 15
ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಡಾ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದ ಕಾಂಗ್ರೆಸ್ ಹೈಕಮಾಂಡ್ ಧೋರಣೆಗೆ ರಾಮನಗರ ಜಿಲ್ಲೆಯಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ.
ಸಮತಾ ಸೈನಿಕ ದಳ ಮತ್ತು ಛಲವಾದಿ ಮಹಾಸಭಾ ನೇತೃತ್ವದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಎದುರಿನಿಂದ ಮೆರವಣಿಗೆಯಲ್ಲಿ ತೆರಳಿ ಐಜೂರು ವೃತ್ತದಲ್ಲಿ ಕೆಲ ಕಾಲ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಹಾಗೂ ಪಕ್ಷದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸರ್ಕಾರದ ಅರ್ಧ ಅವಧಿಗಾದರೂ ಖರ್ಗೆ, ಪರಮೇಶ್ವರ್ ಪೈಕಿ ಒಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು ಆಗ್ರಹಿಸಿದರು.
ದಲಿತ ವಿರೋಧಿ ನೀತಿ: ಕಾಂಗ್ರೆಸ್ ಕೂಡ ದಲಿತ ವಿರೋಧಿ ಎನ್ನುವುದು ಈ ಬಾರಿ ಮುಖ್ಯಮಂತ್ರಿ ಆಯ್ಕೆಯಲ್ಲೇ ಸಾಬೀತಾಗಿದೆ. ಒಂದೊಮ್ಮೆ ದಲಿತ ಸಮುದಾಯಕ್ಕೆ ಮುಂದಿನ 30 ತಿಂಗಳಲ್ಲಾದರೂ ಅವಕಾಶ ಕಲ್ಪಿಸದಿದ್ದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದಾಗ ಘೇರಾವ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸುಡುವ ಮನೆ, ನನ್ನ ಜನಗಳು ಎಚ್ಚರದಿಂದ ಇರಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ಅಂದೇ ಹೇಳಿದ್ದರು. ಅದು ಇಂದು ಸಾಬೀತಾಗಿದೆ. ಕಾಂಗ್ರೆಸ್‌ನ ದಲಿತ ವಿರೋಧಿ ನೀತಿ ಸ್ಪಷ್ಟವಾಗಿದೆ.
ಇದುವರೆಗೆ ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಹಾಗೂ ಹಿಂದುಳಿದ ವರ್ಗದವರಿಗೆ ಮಣೆ ಹಾಕಿರುವ ಕಾಂಗ್ರೆಸ್ ದಲಿತರನ್ನು ದಮನ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದ 150ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳು ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕ. ಕಾಂಗ್ರೆಸ್ ದಲಿತರನ್ನ ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಂಡಿದೆಯಷ್ಟೇ. ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಕನಿಷ್ಠ ಕಾಳಜಿ ವಹಿಸಿಲ್ಲ ಎಂದು ಕಿಡಿ ಕಾರಿದರು.
ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅದರೆ, ಕಾಂಗ್ರೆಸಿಗರು ಕುತಂತ್ರ ನಡೆಸಿ ಸ್ವತಃ ಪರಮೇಶ್ವರ್ ಅವರನ್ನೆ ಸೋಲಿಸಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನಖರ್ಗೆ ಅವರಿಗೆ 3ನೇ ಬಾರಿ ಸಿಎಂ ಹುದ್ದೆ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಗೋವಿಂದಯ್ಯ, ಶಿವರಾಜ್ ಭರಣಿ, ನಟರಾಜ್, ನಾಗೇಶ್, ಪುರುಷೋತ್ತಮ್, ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.