'ಪ್ರತಿಭೆಗೆ ಎಲ್ಲೆಡೆ ಮನ್ನಣೆ'
ದೊಡ್ಡಬಳ್ಳಾಪುರ: ಪ್ರತಿಭೆಗೆ ಎಲ್ಲೆಡೆ ಮನ್ನಣೆ ಸಿಗುತ್ತದೆ. ದೊಡ್ಡಬಳ್ಳಾಪುರದಲ್ಲಿ ಹಲವು ವರ್ಷಗಳ ಬಳಿಕ ಪಿಯುಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಕಂಡು ಬಂದಿದ್ದು, ರಾಜ್ಯಮಟ್ಟದಲ್ಲಿ 11ನೇ ಸ್ಥಾನ ಗಳಿಸಿರುವ ವಿದ್ಯಾರ್ಥಿ ಆದಿನಾರಾಯಣಪ್ರಸಾದ್ ಸಾಧನೆ ಶ್ಲಾಘನೀಯ ಎಂದು ದೇವರಾಜ ಅರಸ್ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಜಿ.ಎಚ್.ನಾಗರಾಜ ಹೇಳಿದರು.
ಇಲ್ಲಿನ ಶ್ರೀದೇವರಾಜ ಅರಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಡಿ.ಎಸ್.ಆದಿನಾರಾಯಣಪ್ರಸಾದ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 580 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯ ಮಟ್ಟದಲ್ಲಿ 11ನೇ ಮತ್ತು ಬೆಂ.ಗ್ರಾ.ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಸಿಇಓ ಎಸ್.ಎಲ್.ಗಂಗಾಧರಪ್ಪ ಮಾತನಾಡಿದರು.
ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ಆದಿನಾರಾಯಣ ಪ್ರಸಾದ್ ಸಾಧನೆ ಎಲ್ಲರಿಗೂ ಮಾದರಿ. ಈ ವಿದ್ಯಾರ್ಥಿ ಬಯಸಿದರೆ ಆರ್.ಎಲ್.ಜಾಲಪ್ಪ ತಾಂತ್ರಿಕ ಕಾಲೇಜಿನಲ್ಲಿ ಉಚಿತ ಇಂಜಿನಿಯರಿಂಗ್ ಸೀಟು ನೀಡಿ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು. ಜೊತೆಗೆ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಕೂಡ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಲವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆದಿನಾರಾಯಣಪ್ರಸಾದ್‌ಗೆ 10 ಸಾವಿರ ನಗದು ಬಹುಮಾನ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.