ಶಂಕರರಿಂದ ಭವ್ಯ ಭಾರತಕ್ಕೆ ಭದ್ರ ಬುನಾದಿ
ಕ.ಪ್ರ. ವಾರ್ತ್ಣೆ ಆನೇಕಲ ಮೇ 15
ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸನಾತನ ಹಿಂದೂ ಧರ್ಮ ತನ್ನ ಶೋಭೆಯನ್ನು ಕಳೆದುಕೊಳ್ಳುವ ಹಂತದಲ್ಲಿದ್ದಾಗ ಮರುಚೇತನ ನೀಡಿದ ಮಹಾನ್ ಪುರುಷ ಆದಿ ಗುರು ಶಂಕರಾಚಾರ್ಯರು ಎಂದು ಚತುರ್ಭಾಷಾ ಪಂಡಿತ ಬಿದರಗುಪ್ಪೆ ಕೆ. ವೆಂಕಟೇಶ ಮೂರ್ತಿರವರು ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಶಂಕರ ಸೇವಾ ಮಿತಿಯವರು ಆಚರಿಸಿದ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶಂಕರಾಜಾರ್ಯರು ಕೇವಲ 32 ವರ್ಷ ಅವಧಿಯಲ್ಲಿ ವಿಶ್ವ ಪರ್ಯಟನೆ ಮಾಡಿ ಎಲ್ಲ ಮತದವರನ್ನೂ ಒಗ್ಗೂಡಿಸಿ ಹರಿ-ಹರ ಒಂದೇ ಎಂದು ಪ್ರತಿಪಾದಿಸಿದ ವಿಶಿಷ್ಟ ವ್ಯಕ್ತಿಯಾಗಿದ್ದರು.
ಅದ್ವೈತ ಸಿದ್ಧಾಂತ ಮೂಲಕ ದೇಶವಾಸಿಗಳನ್ನು ಒಗ್ಗೂಡಿಸಿ ಭಾವೈಕ್ಯತೆ ಹಾಗೂ ಸಹೋದರತೆ ತುಂಬಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಭದ್ರ ಬುನಾದಿ ಹಾಕಿದ ಧೀಮಂತ ಶಕ್ತಿಯಾಗಿದ್ದರು ಎಂದು ಹೇಳಿದರು.
ಉಪನ್ಯಾಸಕಿ ಗಾಯತ್ರಿ ನಂಜುಂಡಯ್ಯ ಮಾತನಾಡಿ ವೇದ ಎಂದರೇ ವಿಜ್ಞಾನ. ನಭೋ ಮಂಡಲ, ಸೌರ ಶಕ್ತಿ, ಅಣು, ಕಣದ ಬಗ್ಗೆ 8ನೆಯ ಶತಮಾನದಲ್ಲೇ ಪ್ರತಿಪಾದಿಸಿದ ಆಧುನಿಕ ವಿಜ್ಞಾನಿಯಾಗಿದ್ದರು.
ಸಮಿತಿಯ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಆನಂದ ನಾರಾಯಣ ಶಾಸ್ತ್ರಿ, ನರಸಿಂಹಮೂರ್ತಿ, ರವಿಶಾಸ್ತ್ರಿ, ಸುಬ್ರಹ್ಮಣ್ಯ ವೈದ್ಯೇಶ್ವರ ದೀಕ್ಷಿತ್ ಚತುರ್ಭಾಷಾ ಪಂಡಿತ ಕೆ. ವೆಂಕಟೇಶಮೂರ್ತಿರವರನ್ನು ಸನ್ಮಾನಿಸಿದರು.
ಶಂಕರ-ಶಾರದಾ ವಿಗ್ರಹ: ತಾಲೂಕು ತೆಲಗರಹಳ್ಳಿ ನರಸಿಂಹಯ್ಯರವರು 1916ರಲ್ಲಿ ಮುಂಬಯಿಯಿಂದ ಶ್ರೀ ಶಂಕರಾಚಾರ್ಯರ ಅಮೃತ ಶಿಲೆ ವಿಗ್ರಹವನ್ನು ತರಿಸಿ ಪ್ರತಿಷ್ಠಾಪನೆ ಮಾಡಿದರು. ಶ್ರೀ ಶಾರದಾಂಬ ದೇವಿಯ ವಿಗ್ರಹವೂ ನೋಡಲು ತುಂಬ ಸುಂದರವಾಗಿದ್ದು ಅಪರೂಪದ ವಿಗ್ರಹಗಳಾಗಿರುತ್ತದೆ.