ಕಾಂಗ್ರೆಸ್ ಮಾತು ತಪ್ಪಿದೆ: ಕಿಡಿ
ಚನ್ನಪಟ್ಟಣ: ರಾಜ್ಯದ ಮುಖ್ಯಮಂತ್ರಿಯನ್ನಾಗಿ ದಲಿತ ನಾಯಕನನ್ನು ಆಯ್ಕೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬೇರೆ ಸಮುದಾಯದ ನಾಯಕರನ್ನು ಆಯ್ಕೆ ಮಾಡುವ ಮೂಲಕ ತನ್ನ ಮಾತು ತಪ್ಪಿದೆ ಎಂದು ಸಮತಾ ಸೈನಿಕ ದಳ ಕಿಡಿಕಾರಿದೆ.
ಪತ್ರಿಕಾ ಹೇಳಿಕೆ ನೀಡಿರುವ ಪದಾಧಿಕಾರಿಗಳು, ದಲಿತರ ಮತಗಳಿಂದಲೇ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಈ ಬಾರಿಯಾದರೂ ದಲಿತರಿಗೆ ಅಧಿಕಾರ ನಡೆಸುವ ಅವಕಾಶ ಕೊಡುತ್ತದೆ ಎಂದುಕೊಂಡಿದ್ದು ಹುಸಿಯಾಗಿದೆ, ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಿದ್ದರೂ ಅವರನ್ನು ಗಣನೆಗೆ ತೆಗೆದುಕೊಳ್ಳದಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ. ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ದಲಿತರಿಗೆ ಇಂದಿಗೂ ಮುಖ್ಯಮಂತ್ರಿ ಸ್ಥಾನವನ್ನು ಯಾವ ಪಕ್ಷವೂ ನೀಡಿಲ್ಲ, ರಾಜ್ಯಾಧ್ಯಕ್ಷ ಡಾ. ಪರಮೇಶ್ವರ್ ಅವರ ನೇತೃತ್ವದಲ್ಲಿ ಅಧಿಕಾರ ಪಡೆದುಕೊಂಡು ಈಗ ಅವರನ್ನೇ ಕೈಬಿಡುತ್ತಿರುವುದು ಸರಿಯಲ್ಲ. ಕೂಡಲೇ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ, ಮುಂದಿನ 30 ತಿಂಗಳ ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಬೇಕೆಂದು ಪದಾಧಿಕಾರಿಗಳು ಒತ್ತಾಯ ಮಾಡಿದ್ದಾರೆ.