ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚಿನ್ನಾಭರಣ ಖರೀದಿಗೆ ಸುವರ್ಣ ಕಾಲ...

Vishwanath S
Updated On : 18 May 2013, 12:47 pm

ವಿಶೇಷ ವರದಿ
ಬೆಂಗಳೂರು:
'ಅಕ್ಷಯ ತದಿಗೆ' ಮುಗಿದರೂ ಜನರು ಚಿನ್ನಾಭರಣಗಳ ಅಂಗಡಿಗೆ ಹೋಗುವುದು ಮಾತ್ರ ಮುಗಿದಿಲ್ಲ..!
ಸಾಮಾನ್ಯವಾಗಿ ಅಕ್ಷಯ ತದಿಗೆ ಸಮಯದಲ್ಲಿ ಚಿನ್ನಾಭರಣಗಳ ಅಂಗಡಿಗಳಲ್ಲಿ ವಿಪರೀತ ಜನಸಂದಣಿ ಹಾಗೂ ಒಡವೆಗಳ ಖರೀದಿಯ ಭರಾಟೆ ಇರುತ್ತದೆ. ತದಿಗೆ ಕಳೆಯುತ್ತಿದ್ದಂತೆ ಒಡವೆಯ ಗೊಡವೆ ನಮಗೇಕೆ ಎಂಬಷ್ಟರ ಮಟ್ಟಿಗೆ ಸ್ವರ್ಣಪ್ರಿಯರು ಚಿನ್ನಾಭರಣಗಳ ಅಂಗಡಿಗಳಿಂದ ದೂರವಾಗುವುದು ಕೂಡ ಅಷ್ಟೇ ಸಾಮಾನ್ಯ.ಆದರೆ ಈ ಬಾರಿ ಮಾತ್ರ ಪರಿಸ್ಥಿತಿ ವಿಭಿನ್ನ. ಹಾಗಾಗಿ, ಬಹುತೇಕ ಚಿನ್ನಾಭರಣ ಅಂಗಡಿಗಳಲ್ಲಿ ಅಕ್ಷಯ ತದಿಗೆ ಮುಗಿದರೂ ತದಿಗೆಯ ವಾತಾವರಣ ಮಾತ್ರ ಪೂರ್ಣ ಮರೆಯಾಗಿಲ್ಲ. ಚಿನ್ನದ ಬೆಲೆಯಲ್ಲಿ ಇದೇ ಪ್ರಥಮ ಬಾರಿಗೆ ದಾಖಲೆ ಕುಸಿತ ಉಂಟಾಗಿರುವುದೇ ಇದಕ್ಕೆ ಕಾರಣ. ಬಹಳ ಸಮಯದ ಬಳಿಕ ಚಿನ್ನದ ಬೆಲೆಯಲ್ಲಿ ಈ ಪ್ರಮಾಣದಲ್ಲಿ ನಿರಂತರ ಕುಸಿತ ಉಂಟಾಗಿರುವುದರಿಂದ ಆಭರಣ ಪ್ರಿಯರು ಮಳಿಗೆಗಳಿಗೆ ಧಾವಿಸಿ ಚಿನ್ನಾಭರಣ ಖರೀದಿಸುತ್ತಿದ್ದಾರೆ.
ಶೇ.20ರಷ್ಟು ಹೆಚ್ಚಳ: ಚಿನ್ನಾಭರಣ ತಯಾರಿಕೆ ಹಾಗೂ ಚಿನ್ನಾಭರಣ ಮಾರಾಟ ಸೇರಿದಂತೆ ರಾಜ್ಯದಲ್ಲಿ ಸುಮಾರು 12 ಸಾವಿರದಷ್ಟು ಚಿನ್ನಾಭರಣ ಅಂಗಡಿಗಳಿವೆ. ಇವುಗಳಲ್ಲಿ ಪ್ರತಿದಿನ ಒಟ್ಟು ಸುಮಾರು 500 ಕೋಟಿಯಷ್ಟು ಚಿನ್ನಾಭರಣ ವಹಿವಾಟು ನಡೆಯುತ್ತದೆ. ಅಕ್ಷಯ ತದಿಗೆ ಸಂದರ್ಭದಲ್ಲಿ ಈ ಪ್ರಮಾಣದಲ್ಲಿ ತೀವ್ರ ಏರಿಕೆ ಉಂಟಾಗಿ ಬಳಿಕ ಎಂದಿನ ಪ್ರಮಾಣಕ್ಕೆ ಇಳಿಯುತ್ತದೆ. ಆದರೆ ಈ ಬಾರಿ ಹಾಗಾಗಿಲ್ಲ. ಈ ಬಾರಿ ಚಿನ್ನದ ವಹಿವಾಟಿನಲ್ಲಿ ಎಂದಿಗಿಂತ ಶೇ.20ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಕರ್ನಾಟಕ ಜುವೆಲ್ಲರಿ ಮಾಲೀಕರ ಸಂಘದ ಅಧ್ಯಕ್ಷ ,  .ಎ. ಶರವಣ.
ಬೆಲೆ ಕುಸಿತಕ್ಕೆ ಆರ್ಥಿಕ ಕುಸಿತ ಕಾರಣ: ಮೂರು ತಿಂಗಳ ಹಿಂದೆ ಚಿನ್ನದ ಬೆಲೆ ಗ್ರಾಮ್‌ಗೆ ಗರಿಷ್ಠ ಸುಮಾರು 3,100 ತಲುಪಿತ್ತು. ಆದರೆ ಈಗ ಸುಮಾರು 2500 ರಿಂದ 2600 ರಷ್ಟಿದೆ. ಸುಮಾರು 2 ವರ್ಷದ ಹಿಂದೆ ಚಿನ್ನ ಈ ಬೆಲೆಗೆ ಸಿಗುತ್ತಿತ್ತು. ಕಳೆದ ಮೂರು ತಿಂಗಳಲ್ಲಿ ಚಿನ್ನದ ಬೆಲೆ ದಾಖಲೆ ಕುಸಿತವಾಗಿದೆ. ಸ್ವೀಡನ್, ಗ್ರೀಸ್, ಐರ್ಲೆಂಡ್ ಮುಂತಾದ ಐರೋಪ್ಯ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದಾಗಿ ಅಲ್ಲಿನ ಜನ ಬಚ್ಚಿಟ್ಟ ಚಿನ್ನವನ್ನು ಬಿಕರಿ ಮಾಡುತ್ತಿದ್ದಾರೆ. ಹಾಗಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ ಎಂದು ಶರವಣ ಅವರು ತಿಳಿಸಿದ್ದಾರೆ. ಬೆಂಗಳೂರು ಜುವೆಲ್ಲರಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಅವರು ಕೂಡ, ಮೂವತ್ತು ವರ್ಷಗಳಲ್ಲಿ ಇದು ದಾಖಲೆ ಕುಸಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
3 ತಿಂಗಳು ಸ್ವರ್ಣಕಾಲ: ಇನ್ನು ಮೂರು ತಿಂಗಳ ಕಾಲ ಚಿನ್ನದ ಬೆಲೆ ಇದೇ ರೀತಿ ಅಗ್ಗವಾಗಿ ಇರಲಿದ್ದು, ಹೆಚ್ಚೆಂದರೆ ಗ್ರಾಮ್‌ಗೆ ನೂರಿನ್ನೂರು ರುಪಾಯಿ ಏರಿಕೆ ಆಗಬಹುದು. ಆ ಬಳಿಕ ಮತ್ತೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಮೂರು ತಿಂಗಳು ಚಿನ್ನ ಖರೀದಿಗೆ ಸುವರ್ಣ ಸಮಯ. ಗ್ರಾಹಕರು ಮೂರು ತಿಂಗಳಲ್ಲಿ ಹಂತ ಹಂತವಾಗಿ ಚಿನ್ನ ಖರೀದಿಸಿದಲ್ಲಿ ಒಳ್ಳೆಯ ಹೂಡಿಕೆ ಆಗಲಿದೆ. ಸಾಕಷ್ಟು ಗ್ರಾಹಕರಿಗೆ ಇದರ ಅರಿವಾಗಿರುವುದರಿಂದ ಬಹಳಷ್ಟು ಮಂದಿ ಚಿನ್ನಾಭರಣ ಮಳಿಗೆಗೆ ಮುಗಿಬೀಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement