ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣೆ ಸೋಲಿಂದ ಧೃತಿ ಗೆಟ್ಟಿಲ್ಲ

Vishwanath S
Updated On : 18 May 2013, 12:43 pm

ಕ.ಪ್ರ.ವಾರ್ತೆ ,   ಚನ್ನಪಟ್ಟಣ ,   ಮೇ 17
ವಿಧಾನ ಸಭಾ ಚುನಾವಣೆಯ ಸೋಲಿನಿಂದ ನಾವು ಧೃತಿ ಗೆಟ್ಟಿಲ್ಲ, ಸೋಲೆ ಗೆಲವಿನ ಸೋಪಾನ ವೆಂಬಂತೆ ತಾಲೂಕಿನಲ್ಲಿ ಪಕ್ಷವನ್ನು ಬಲಗೊಳಿಸಲು ಶ್ರಮಿಸುವುದಾಗಿ ಬಮೂಲ್ ನಿರ್ದೇಶಕ, ಜೆಡಿಎಸ್ ಮುಖಂಡ ಎಸ್. ಲಿಂಗೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಬಮೂಲ್ ಶಿಬಿರದ ಕಚೇರಿಯಲ್ಲಿ ಮೃತ ರಾಸುಗಳು ಮತ್ತು ಮೃತ ಸದಸ್ಯರಿಗೆ ಪರಿಹಾರದ ಚೆಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದ್ದೆವಾದರೂ ಸೋಲು ಸಂಭವಿಸಿದ್ದು ನಮಗೆ ಬೇಸರ ಮೂಡಿಸಿದೆ. ಈ ಸೋಲಿನ ಆತ್ಮಾವಲೋಕನ ಮಾಡಿ ಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲು ಶ್ರಮಿಸುವುದಾಗಿ  ತಿಳಿಸಿದರು.
ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಹಗಲಿರುಳು ಶ್ರಮಿಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸೋಲಿನಿಂದ ಎದೆ ಗುಂದಬೇಕಿಲ್ಲ. ಕಾರ್ಯಕರ್ತರ ರಕ್ಷಣೆಗೆ ನಾವೆಲ್ಲ ಸದಾಕಾಲ ಸಿದ್ಧವಿದ್ದು ಕಾರ್ಯಕರ್ತರು ಧೈರ್ಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಮನವಿ ಮಾಡಿದರು.
ವರಿಷ್ಠರ ಜತೆ ಮಾತನಾಡಿದ್ದೇನೆ: ಈಬಾರಿಯ ಚುನಾವಣೆಯ ಫಲಿತಾಂಶ ನಮಗೆ ಅಚ್ಚರಿ ತಂದಿದೆ.
ಅನಿತಾಕುಮಾರಸ್ವಾಮಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಬೇಕಿತ್ತಾದರೂ ಸೊಲನುಭವಿಸಿದ್ದು ಬರಿಸಲಾಗದ ಆಘಾತವಾಗಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಮನದಟ್ಟುಮಾಡಿ ಕೊಂಡು ಆ ಪ್ರಮಾದ ಮುಂದಿನ ದಿನಗಳಲ್ಲಿ ನಡೆಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಮಾತುಕತೆ: ಈ ಸಂಬಂಧ  ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ, ನಮ್ಮ ನಾಯಕಿ  ಅನಿತಾಕುಮಾರಸ್ವಾಮಿ ಜತೆ ಮಾತುಕತೆ ನಡೆಸಿದ್ದು ಅವರು ಈ ಕ್ಷೇತ್ರದಲ್ಲೇ ಮುಂದುವರೆಯುವ ಸ್ಪಷ್ಟಸಂದೇಶ ನೀಡಿದ್ದಾರೆ. ಸದ್ಯದಲ್ಲೇ ಅನಿತಾಕುಮಾರಸ್ವಾಮಿ ಕ್ಷೇತ್ರಕ್ಕೆ ಆಗಮಿಸಲಿದ್ದು ಕಾರ್ಯಕರ್ತರು ಮತ್ತು ಮುಖಂಡರ ಜತೆ ಚರ್ಚಿಸಿ ಮುಂದಿನ ನಡೆ ಕೈಗೊಳ್ಳಲಿದ್ದಾರೆ ಎಂದರು.
ಅಪಪ್ರಚಾರಕ್ಕೆ ಅಂಜುವುದಿಲ್ಲ: ಕೆಲಮಂದಿ ನನ್ನ ವಿರುದ್ಧ ಇಲ್ಲ ಸಲ್ಲದ ಗಾಳಿಸುದ್ದಿಗಳನ್ನು ಹಬ್ಬಿಸಿ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದು, ಇಂತಹ ಹುನ್ನಾರಗಳನ್ನು ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ. ಇಂತಹ ಹುನ್ನಾರಗಳಿಗೆ ನಾನು ಅಂಜುವುದಿಲ್ಲ ಎಂದರು.
ಈಬಾರಿಯ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಾನು ಎಷ್ಟು ಶ್ರಮಿಸಿದ್ದೇನೆ ಎಂಬುದು ಕ್ಷೇತ್ರದ ಕಾರ್ಯಕರ್ತರಿಗೆ, ನಮ್ಮ ವರಿಷ್ಠರಿಗೆ ತಿಳಿದಿದೆ. ಕೆಲ ಮಂದಿ ಸ್ವಾರ್ಥ ಸಾಧನೆಗಾಗಿ ಇಲ್ಲಸಲ್ಲದ ಪಿತೂರಿ ಮಾಡುತ್ತಿದ್ದು ಇಂತಹ ಪಿತೂರಿಗಳಿಂದ ನನ್ನ ರಾಜಕೀಯ ಜೀವನವನ್ನು ಹಾಳು ಮಾಡಬಹುದೆಂದು ಕೊಂಡಿದ್ದರೆ ಅದು ಕೇವಲ ಅವರ ಭ್ರಮೆಯಷ್ಟೇ ಎಂದರು.
ಹಾಲು ಉತ್ಪಾದಕರ ಹಿತಕಾಯುವೆ: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಮತ್ತೆ 2ರು. ಗಳಿಗೆ  ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ರೈತರಿಗೆ ಹೆಚ್ಚು ಲಾಭಸಿಗುವಂತೆ ನಾನು ಒಕ್ಕೂಟದ ಸಭೆಯಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ನಮ್ಮ ಒಕ್ಕೂಟ ಅತಿಹೆಚ್ಚು ಬೆಲೆಯನ್ನು ಉತ್ಪಾದಕರಿಗೆ ನೀಡುತ್ತಿದ್ದು, ಒಕ್ಕೂಟ ನಷ್ಟದಲ್ಲಿರುವ ಕಾರಣ ಹಾಲು ಉತ್ಪಾದಕರಿಗೆ ನೀಡುತ್ತಿರುವ ಬೆಲೆಯನ್ನು ಕಡಿಮೆ ಮಾಡಬೇಕೆಂಬ ಪ್ರಸ್ಥಾವನೆ ಒಕ್ಕೂಟದ ಆಡಳಿತ ಮಂಡಲಿ ಮುಂದಿದ್ದು 50 ಪೈಸಗಿಂದ ಹೆಚ್ಚಿನ ಮೊತ್ತವನ್ನು ಕಡಿಮೆ ಮಾಡದಂತೆ ನಾವು ಸ್ಪಷ್ಟಪಡಿಸಿದ್ದೇವೆ ಎಂದರು.
ಒಕ್ಕೂಟದ ವ್ಯಾಪ್ತಿಗೆ ಒಳಪಡುವ 11 ತಾಲೂಕು ಗಳ ಪೈಕಿ ನಮ್ಮ ತಾಲೂಕು ಅತಿಹೆಚ್ಚು ಸೌಲಭ್ಯಗಳನ್ನು ಪಡೆಯುತ್ತಿದ್ದು ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣ ಎಂದ ಲಿಂಗೇಶ್ ಕುಮಾರ್ ಹೈನುಗಾರಿಕೆಯಲ್ಲಿ ನಮ್ಮ ತಾಲೂಕನ್ನು ಮಾದರಿ ತಾಲೂಕಾಗಿಸುವುದೇ ನನ್ನ ಗುರಿ ಎಂದರು.
ಈ ಸಂದರ್ಭದಲ್ಲಿ ಶಿಬಿರದ ಉಪವ್ಯವಸ್ಥಾಪಕ ಮುನಿರಾಜು, ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಮಹದೇವೇಗೌಡ, ಪ್ರಸನ್ನಕುಮಾರ್, ಅಮಿತಾ ಹೆಗಡೆ, ಕಚೇರಿ ಸಹಾಯಕ ಪುಟ್ಟಸ್ವಾಮಿಗೌಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement