ಪೇದೆಗೆ ಹೃದಯಾಘಾತ: ಸಾವು
ರಾಮನಗರ: ಕರ್ತವ್ಯ ನಿರತ ಪೇದೆಯೊಬ್ಬರು ತೀವ್ರ ಹೃದಯಾಘಾತದಿಂದ ಠಾಣೆಯಲ್ಲೇ ಮೃತಪಟ್ಟ ಘಟನೆ ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಸಂಭವಿಸಿದೆ. ಮೂಲತಃ ಮಂಡ್ಯ ಜಿಲ್ಲೆಯ ಚಿಕ್ಕಬಾಗಿಲು ಗ್ರಾಮದ ಚಿಕ್ಕಮಂಚಯ್ಯ (52) ಮೃತಪಟ್ಟ ಪೊಲೀಸ್ ಪೇದೆ. ಕಳೆದ 2 ವರ್ಷಗಳಿಂದ ಐಜೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 6ರ ಸುಮಾರಿಗೆ ಠಾಣೆಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡು ಠಾಣೆಯಲ್ಲೇ ಕುಸಿದುಬಿದ್ದರು. ಬಳಿಕ ಅವರನ್ನು ನಗರದ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆದಲ್ಲಿಯೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು. ನಂತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಸಾಗಿಸಿ, ಅಂತ್ಯ ಕ್ರಿಯೆ ನಡೆಸಲಾಯಿತು.