ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಲ ಕಾರ್ಮಿಕರಿಂದ ಬಾಳ ತಲೆನೋವು..!

Vishwanath S
Updated On : 18 May 2013, 12:45 pm

ವಿಶೇಷ ವರದಿ
ಬೆಂಗಳೂರು:
ಇದೊಂದು ರೀತಿ ಹೋದ ಪುಟ್ಟ, ಬಂದ ಪುಟ್ಟ ಎಂಬಂತೆ.
ಬಿಹಾರದಿಂದ ಕರ್ನಾಟಕಕ್ಕೆ ಬರುವ ಬಾಲಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೊಲೀಸರು ಅವರನ್ನು ವಾಪಸ್ ಕಳುಹಿಸಿದರೂ ಮತ್ತೆ ಆ ಮಕ್ಕಳು ಇಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಹಾರದ ಮಕ್ಕಳು ಹೆಚ್ಚಾಗಿ ರೈಲಿನಲ್ಲಿ ಬಂದು ರಾಜ್ಯ ಸೇರುತ್ತಾರೆ. ಇದರಲ್ಲಿ ಮಧ್ಯವರ್ತಿಗಳ ಪಾತ್ರವೇ ಹೆಚ್ಚಿದೆ. ಅವರೇ ಮಕ್ಕಳನ್ನು ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸುತ್ತಾರೆ. ಆದ್ದರಿಂದ ಮಧ್ಯವರ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಅಧಿಕಾರಿಗಳು.
ರಾಜ್ಯ ಸರ್ಕಾರ ಬಿಹಾರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದು ಮಕ್ಕಳ ವಲಸೆ ತಪ್ಪಿಸುವಂತೆ ಒತ್ತಾಯಿಸಬೇಕು. ಮತ್ತೊಂದೆಡೆ ಆಯಾ ವ್ಯಾಪ್ತಿಯ ರೈಲ್ವೇ ಇಲಾಖೆ ಸಿಬ್ಬಂದಿ ಇಂತಹ ಮಕ್ಕಳು ಹೊರಗೆ ಹೋಗುವುದನ್ನು ಗಮನಹರಿಸಬೇಕು. ಹಾಗಾದಲ್ಲಿ ಮಕ್ಕಳು ಬರುವುದನ್ನು ಸಂಪೂರ್ಣ ತಡೆಗಟ್ಟು ಸಾಧ್ಯವಿಲ್ಲದಿದ್ದರೂ, ಕೊಂಚ ತಗ್ಗಿಸಬಹುದು ಎನ್ನುತ್ತಾರೆ ಅಧಿಕಾರಿಗಳು.
ಬಡನತ ಕಾರಣ: ಬಾಲಕಾರ್ಮಿಕರು ರಾಜ್ಯಕ್ಕೆ ಬರಲು ಅವರ ಕುಟುಂಬವನ್ನು ಕಾಡುವ ಬಡತನವೇ ಕಾರಣ. ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಈ ಮಕ್ಕಳಿಗೆ ಕೆಲಸ ಬೇಕು. ಹೀಗಾಗಿ ಉದ್ಯೋಗ ಅರಸಿ ಅವರು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಬರುತ್ತಾರೆ. ತಿಂಗಳಿಗೆ ಸರಾಸರಿ 30ಕ್ಕೂ ಹೆಚ್ಚು ಮಕ್ಕಳು ನಗರದಲ್ಲಿ ಪತ್ತೆಯಾಗುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.ಕಾರ್ಖಾನೆಗಳಲ್ಲಿ ಮಕ್ಕಳು: ನಗರದ ಹೋಟೆಲ್‌ಗಳಲ್ಲಿ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇಂತಹ ಮಕ್ಕಳನ್ನು ಕಾಣಬಹುದು. ಇನ್ನು ಚರ್ಮದ ಬ್ಯಾಗ್ ತಯಾರು ಮಾಡುವ ಕಾರ್ಖಾನೆಗಳು, ಅಗರಬತ್ತಿ ಕಾರ್ಖಾನೆಗಳಲ್ಲಿ ಬಿಹಾರದ ಮಕ್ಕಳು ಹೆಚ್ಚಾಗಿ ಕಂಡುಬರುತ್ತಾರೆ.
ವಿವಿಧ ಸಂಘಸಂಸ್ಥೆಗಳು ಅಂತಹ ಮಕ್ಕಳನ್ನು ಪತ್ತೆ ಮಾಡಿ ತವರಿಗೆ ಕಳುಹಿಸಲು ಮುಂದಾದರೆ ಪೋಷಕರೇ ಬೇಡವೆನ್ನುತ್ತಾರೆ. ಮಕ್ಕಳನ್ನು ಕರೆದುಕೊಂಡು ಹೋಗಿ ಏನು ಮಾಡುವುದು. ಅಲ್ಲಿ ಸಂಸಾರ ಸಾಗಿಸುವುದು ಕಷ್ಟ ಹಾಗಾಗಿ ಕೆಲಸಕ್ಕೆ ಕಳುಹಿಸುತ್ತೇವೆ ಎಂಬುದು ಅವರ ಅಭಿಪ್ರಾಯ. ಹಾಗಾಗಿ ಬಿಹಾರದ ಮಕ್ಕಳನ್ನು ವಾಪಸ್ ಕಳುಹಿಸಿದರೂ ಮತ್ತೆ ಅವರು ವಾಪಸ್ ಬರುವುದು ನಿಲ್ಲುತ್ತಿಲ್ಲ ಎಂಬುದು ಬಾಲಮಂದಿರ ಅಧಿಕಾರಿಗಳ ಆರೋಪ.
5 ಗಂಟೆ ದುಡಿಮೆ: ಮತ್ತೊಂದೆಡೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ಮೊರೆ ಹೋಗಿದ್ದಾರೆ. 16 ವರ್ಷ ಮೇಲ್ಪಟ್ಟ ಮಕ್ಕಳನ್ನು 5 ಗಂಟೆ ದುಡಿಸಿಕೊಳ್ಳಲು ತಮಗೆ ಅವಕಾಶವಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಸಂಘಸಂಸ್ಥೆಗಳ ಸದಸ್ಯರು ಅಂತಹ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಹಾಗಾಗಿ ಇದಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಮನವಿ ಮಾಡಿದ್ದಾರೆ.ಪೊಲೀಸರಿಗೆ ಪ್ರಯಾಸ: ಹೊರರಾಜ್ಯದ ಬಾಲಕಾರ್ಮಿಕರನ್ನು ವಾಪಸ್ ಕರೆದುಕೊಂಡು ಹೋಗಲು ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ಬಿಟ್ಟು ಬಂದ ಕೆಲವೇ ದಿನಗಳಲ್ಲಿ ಮಕ್ಕಳೂ ಸಹ ವಾಪಸ್ ಆಗುತ್ತಾರೆ. ಇದರಿಂದ ಸಮಯವೂ ವ್ಯರ್ಥವಾಗುತ್ತದೆ ಎಂಬುದು ಅಧಿಕಾರಿಗಳ ಅಳಲು.
ಪ್ರತಿ ವರ್ಷ ಬಾಲ ಕಾರ್ಮಿಕರ ಆಗಮನ: ಬೆಂಗಳೂರಿಗೆ ಪ್ರತಿವರ್ಷ ಬಾಲಕರ ಬಾಲಮಂದಿರದಲ್ಲಿ 1500ಕ್ಕೂ ಹೆಚ್ಚು ಬಾಲಕಾರ್ಮಿಕರು ಬರುತ್ತಾರೆ. ಅವರಲ್ಲಿ 400ರಿಂದ 500 ಮಕ್ಕಳು ಬಿಹಾರದವರೇ ಇರುತ್ತಾರೆ. ದರ್ಬಾಂಗ, ಮೋತಿಹಾರಿ, ಪೂರ್ವ ಚಂಪಾರಣ್ಯ, ಗಯಾ ಜಿಲ್ಲೆಯವರೇ ಹೆಚ್ಚಿದ್ದಾರೆ. 2013 ರಲ್ಲಿ ಜನವರಿ ತಿಂಗಳಲ್ಲಿ ಬಿಹಾರದ ಸುಮಾರು 150 ಮಕ್ಕಳು ದಾಖಲಾಗಿದ್ದರು.  
 ಅವರಲ್ಲಿ ಎಲ್ಲರನ್ನೂ ವಾಪಸ್ ಕಳುಹಿಸಲಾಗಿದೆ.ನಗರಕ್ಕೆ ಬರುವ ಬಾಲಕರಿಗೆ ಹೋಲಿಸಿದರೆ ಬಾಲಕಿಯರ ಸಂಖ್ಯೆ ಕಡಿಮೆ ಇದೆ. ಉಳಿದಂತೆ ವಿವಿಧ ಸಂಘಸಂಸ್ಥೆಗಳು ಮಕ್ಕಳನ್ನು ರಕ್ಷಿಸಿ ಸಂಬಂಧಪಟ್ಟ ಬಾಲಮಂದಿರಗಳಿಗೆ ಒಪ್ಪಿಸುತ್ತಾರೆ. ಅಲ್ಲಿಯೂ ಇದೇ ಪರಿಸ್ಥಿತಿಯಾಗಿದ್ದು, ಪ್ರತಿ ಬಾರಿ ಕಾರ್ಯಾಚರಣೆ ನಡೆಸಿದಾಗ 20ರಿಂದ 30 ಮಕ್ಕಳು ಸಿಗುತ್ತಾರೆ. ಅವರಲ್ಲಿ ಉತ್ತರ ಭಾರತದವರೇ ಹೆಚ್ಚು ಎನ್ನುತ್ತಾರೆ ಬಾಸ್ಕೋ ಸಂಸ್ಥೆಯ ಜೆನಿಫರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement