ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ
ಕ.ಪ್ರ.ವಾರ್ತೆ , ಸೂಲಿಬೆಲೆ , ಮೇ 17
ಬುದ್ಧಿಮಾಂದ್ಯ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೊಸಕೋಟೆ ತಾಲೂಕಿನ ನಂದಗುಡಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರದಂತೆ ಹಿರಿಯರು ರಾಜಿ ಪಂಚಾಯ್ತಿ ನಡೆಸಿ ವಿಫಲರಾದ ಕಾರಣ ಶುಕ್ರವಾರ ಬಾಲಕಿಯ ತಾಯಿ ದೂರು ನೀಡಿದ್ದಾಳೆ.
ನಂದಗುಡಿ ಹೋಬಳಿಯ ವ್ಯಾಪ್ತಿಗೆ ಒಳಪಡುವ ಶಿಡ್ಲಘಟ್ಟ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತರಬಹಳ್ಳಿ ಗ್ರಾಮದ 16 ವರ್ಷದ ಬುದ್ಧಿಮಾಂದ್ಯ ಬಾಲಕಿಯನ್ನು ಅದೇ ಗ್ರಾಮದ ಮಂಜುನಾಥ್ ಗುರುವಾರ ಪುಸಲಾಯಿಸಿ ಗ್ರಾಮದ ಹೊರ ಭಾಗದ ಸರ್ಕಾರಿ ಗೋಮಾಳ ಜಮೀನು ಪ್ರದೇಶಕ್ಕೆ ಕರೆದೋಯ್ದಿದ್ದರು. ಅಲ್ಲಿ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ. ಈ ವಿಚಾರ ಗ್ರಾಮದಲ್ಲಿ ತಿಳಿದು ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು.
ಪಿಸಿಐ ಸಂಪತ್ ಹಾಗೂ ಪಿಎಸ್ಐ ಪ್ರಕಾಶ್ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.