'ಭೂಚೇತನ' ಎಂದರೆ ಲಘು ಪೋಷಕಾಂಶ ನೀಡುವುದಲ್ಲ
ಕ.ಪ್ರ.ವಾರ್ತೆ, ಮಾಗಡಿ, ಮೇ 17
ಭೂಚೇತನ ಯೋಜನೆ ಎಂದರೆ ಕೇವಲ ಭೂಮಿಗೆ ಲಘು ಪೋಷಕಾಂಶ ನೀಡುವುದು ಎಂಬ ತಪ್ಪು ಕಲ್ಪನೆ ಬೇಡ, ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ತಾಂತ್ರಿಕತೆಯಿಂದ ಅಧಿಕ ಇಳುವರಿಯ ಸುಧಾರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಹೈದರಾಬಾದ್ ಇಕ್ರಿಸ್ಯಾಟ್ ಸಂಸ್ಥೆಯ ವಿಜ್ಞಾನಿ ಡಾ.ಕೆ. ಕೃಷ್ಣಪ್ಪ ತಿಳಿಸಿದರು. ಅವರು ಇಲ್ಲಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 2013-14ನೇ ಸಾಲಿನ ಭೂಚೇತನ ಯೋಜನೆಯ 2ನೇ ಹಂತದ 2 ದಿನಗಳ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಕಳೆದ ಸಾಲನಲ್ಲಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಹೆಕ್ಟರ್ ಪ್ರದೇಶ ಆಯ್ಕೆ ಮಾಡಿಕೊಂಡು ಭೂಚೇತನ ಕಾರ್ಯಕ್ರಮದಡಿ ಇಲಾಖೆಯ ಶಿಪಾರಸಿನಂತೆ ಲಘುಪೋಷಕಾಂಶದ ಬಳಸುವಿಕೆಯಿಂದ ಭೂಚೇತನ ಯೋಜನೆ ಬಹಳ ಯಶಸ್ಸು ಕಂಡಿದೆ. 2ನೇ ಹಂತದ ಈ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆಯಾಗಬೇಕು. ಪ್ರಸಕ್ತ ಸಾಲಿಗೆ ಸುಮಾರು 94 ಸಾವಿರ ಹೆಕ್ಟರ್ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದು, ಈ ಯೋಜನೆ ಪ್ರಮುಖ ಬೆಳೆಗಳಾದ ರಾಗಿ, ತೊಗರಿ,ಅಲಸಂದೆ, ಅವರೆ, ಮುಸುಕಿನಜೋಳ, ನೆಲಗಡಲೆ ಬೆಳೆಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಸ್ಥಳೀಯ ಗ್ರಾಮಗುಚ್ಚದಡಿಯಲ್ಲಿ 188 ಮಂದಿ ಅನುವುಗಾರರನ್ನು ನೇಮಕ ಮಾಡಿಕೊಂಡಿದೆ. 9400 ಟನ್ ಜಿಪ್ಸಂ, 940 ಟನ್ ಜಿಂಕ್ ಸಲ್ಪೇಟ್, 470 ಟನ್ ಬೋರಾಕ್ಸ್ ಬೇಡಿಕೆಯಿದ್ದು, ಈಗಾಗಲೇ
ಸ್ಥಳೀಯ ಗುಚ್ಚ ಗ್ರಾಮಗಳ ಗೋದಾಮುಗಳಲ್ಲಿ 900 ಟನ್ ಜಿಪ್ಸಂ, 55 ಟನ್ ಜಿಂಕ್ ಸಲ್ಪೇಟ್, 31 ಟನ್ ಬೋರಾಕ್ಸ್ ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ತರಬೇತಿ ನೀಡಿ
ತಾಲೂಕುವಾರು ವ್ಯವಸ್ಥೆ ಮಾಡಲಾಗಿದೆ. ಸೇವಾ ಮನೋಭಾವನೆಯಿಂದ ಗ್ರಾಮ ಪಂಚಾಯ್ತಿಗಳು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳು ಸಹ ಕೈಜೋಡಿಸಿದರೆ ಬೆಳೆಗಳಲ್ಲಿ ಉತ್ತಮ ಮಟ್ಟದ ಅಧಿಕ ಇಳುವರಿ ಪಡೆಯಲು ಈ ಯೋಜನೆ ಸಹಕಾರಿಯಾಗಿದೆ ಎಂದು ವಿವರಿಸಿದರು.
ನಿರೀಕ್ಷೆ: ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಸಾಲಿಗೆ 1.20 ಲಕ್ಷ ಹೆಕ್ಟರ್‌ಗೆ ಭೂಚೇತನ ಯೋಜನೆ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. 2.80 ಲಕ್ಷ ಟನ್ ಆಹಾರ ಉತ್ಪಾದನೆಗೆ ನಿರೀಕ್ಷಿಸಲಾಗಿದೆ. ರೈತರ ಭೂಚೇತನ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ತಮ್ಮ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಖುಷ್ಕಿಯಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದರು. ಸಾಮಾಜಿಕ ಜಿಲ್ಲಾ ಅರಣ್ಯಾಧಿಕಾರಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಅರಣ್ಯಗಳ ಸಂರಕ್ಷಣೆಯಲ್ಲಿನ ಸಮಸ್ಯೆಗಳು, ಸಿಬ್ಬಂದಿ ಕೊರತೆ, ಅರಣ್ಯ ಇಲಾಖೆಯಲ್ಲಿ ಭೂಚೇತನ ಅಳವಡಿಕೆ ಕುರಿತು ತಿಳಿಸಿಕೊಟ್ಟರು. ಕೃಷಿ ನಿದೇಶನಾಲಯದ ಅಪರ ನಿರ್ದೇಶಕ ಡಾ.ಎಚ್. ಸುಬ್ಬಯ್ಯ, ಚಂದೂರಾಯನಹಳ್ಳಿ ಕೆವಿಕೆ ಸಂಯೋಜಕ ಡಾ.ಕೆ.ಎಚ್.ನಾಗರಾಜು, ಡಾ.ಬಿ.ಎಸ್. ಚಂದ್ರಶೇಖರ್, ಮಾಗಡಿ ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ, ರಾಮನಗರ ಸಹಾಯಕ ಕೃಷಿ ನಿರ್ದೇಶಕ ಎನ್. ಗೋಪಾಲಗೌಡ, ಅಧಿಕಾರಿಗಳಾದ ಮಂಜುನಾಥ್, ನೀಲಕಂಠ, ಗೋವಿಂದಯ್ಯ, ಆನಂದ್, ಪರಮಶಿವಯ್ಯ, ಶ್ಯಾಮ ಸುಂದರ್ ಸೇರಿದಂತೆ ಇತರರು ಇದ್ದರು.