ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲ್ಲ: ಶ್ರೀನಿವಾಸ ಮೂರ್ತಿ
ಕ.ಪ್ರ.ವಾರ್ತೆ , ನೆಲಮಂಗಲ , ಮೇ 17
ಜೆಡಿಎಸ್‌ನಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ತಾವು ಯಾವುದೇ ಕಾರಣಕ್ಕೂ ಶಾಸಕ ಸ್ಥಾನ ತ್ಯಜಿಸಿ ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಅವಕಾಶ ಮಾಡಿಕೊಡುತ್ತೇನೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಅವರು ಶುಕ್ರವಾರ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕ್ಷೇತ್ರದ ಜನತೆ ಅತಿ ಹೆಚ್ಚು ಮತನೀಡಿ ನನಗೆ ಆಶೀರ್ವದಿಸಿದ್ದಾರೆ. ಅವರ ನಂಬಿಕೆಗೆ ಎಂದು ಮೋಸ ಮಾಡುವುದಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ. ಪಕ್ಷಕ್ಕೆ ಹಾಗೂ ಕ್ಷೇತ್ರದ ಜನತೆ ಸೇವೆ ಮಾಡುತ್ತೇನೆ ಎಂದರು.ಪರಮೇಶ್ವರ್ ಇದೇ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಲೆಕ್ಕಾಚಾರ ನಡೆದಿದೆ ಎಂದು ಪತ್ರಿಕೆಗಳಲ್ಲಿ ಬಂದಿರುವ ವರದಿ ಅಪ್ಪಟ ಸುಳ್ಳು. ಇದರಿಂದ ಯಾರು ಗೊಂದಲಪಡಬಾರದು ಎಂದರು.
ಮುಖಂಡ ಗೋವೇನಹಳ್ಳಿ ಶಿವಣ್ಣ ಹಾಗೂ ಕಾರ್ಯಕರ್ತರು ಇದ್ದರು.