ಸಚಿವರ ಪ್ರಮಾಣ, ಐಪಿಎಲ್ ಪಂದ್ಯ; ಮಾರ್ಗ ಬದಲು
ಬೆಂಗಳೂರು: ನೂತನ ಸರ್ಕಾರದ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ, ಮತ್ತೊಂದೆಡೆ ಐಪಿಎಲ್ ಕ್ರಿಕೆಟ್ ಪಂದ್ಯ.
ಈ ಎರಡೂ ಶನಿವಾರ ನಗರದಲ್ಲಿ ಸಮೀಪದ ಸ್ಥಳಗಳಲ್ಲಿ ನಡೆಯಲಿದೆ. ಇದು ಭದ್ರತೆ ದೃಷ್ಟಿಯಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮ ರಾಜಭವನದಲ್ಲಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟ್ವೆಂಟಿ- 20 ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ.
ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಭವನದ ಸುತ್ತಮುತ್ತ ಸಂಚಾರ ನಿಷೇಧಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಪ್ರಮಾಣ ವಚನ: ರಾಜಭವನದ ಅತಿಥಿಗೃಹದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ನೂತನ ಸಚಿವರುಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಸಮಾರಂಭಕ್ಕೆ ಶಾಸಕರು, ಮಾಜಿ ಸಚಿವರು, ಗಣ್ಯರು, ಅತಿಗಣ್ಯರು ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜಭವನದ ಸುತ್ತ, ಅಂಬೇಡ್ಕರ್ ರಸ್ತೆ, ಇನ್ಫೆಂಟರಿ ರಸ್ತೆ, ದೇವರಾಜ ಅರಸು ರಸ್ತೆ, ಅರಮನೆ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಬಾ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, , . ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್ ಹಾಗೂ ರೇಸ್ಕೋರ್ಸ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲ.
ಅದೇ ರೀತಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಶಾಸಕರ ಭವನದ ಒಳಭಾಗ, ವಿಕಾಸಸೌಧ, ಎಲ್ಆರ್ಡಿಇ ಜಂಕ್ಷನ್, ಇಂದಿರಾಗಾಂಧಿ ನೃತ್ಯಕಾರಂಜಿ, ಹಳೇ ಕೆಜಿಐಡಿ ಕಟ್ಟಡದ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ರಿಕೆಟ್ ಪಂದ್ಯಾವಳಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಐಪಿಎಲ್ ಟ್ವೆಂಟಿ - 20 ಕ್ರಿಕೆಟ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕ್ರೀಡಾಂಗಣದ ಸುತ್ತ ವಾಹನ ನಿಲುಗಡೆ ನಿಷೇಧಿಸಿ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯಾಹ್ನ 4ರಿಂದ ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ. ಮೂರು ಗಂಟೆ ಮುಂಚಿತವಾಗಿ ಕ್ರೀಡಾಂಗಣದೊಳಗೆ ಸಾರ್ವಜನಿಕರ ಪ್ರವೇಶ ಇರುತ್ತದೆ.
ಕ್ರೀಡಾಂಗಣಕ್ಕೆ ಬರುವ ಕ್ರಿಕೆಟ್ ಪ್ರೇಮಿಗಳು ಕ್ಯಾಮರಾ, ಕೈಚೀಲ, ತಿಂಡಿ, ತಂಪು ಪಾನೀಯದ ಬಾಟಲ್ಗಳು ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂದ್ಯ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಬಿಎಂಟಿಸಿ ಬಸ್ನ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 11 ರಿಂದ ರಾತ್ರಿ 9 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ನಿಲುಗಡೆ ನಿಷೇಧ: ಸಿಟಿಓ. ವೃತ್ತ, ಕ್ವೀನ್ಸ್ ವೃತ್ತ, ಅನಿಲ್ ಕುಂಬ್ಳೆ ವೃತ್ತ, ಲಿಂಕ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, , . ಚೌಡಯ್ಯ ರಸ್ತೆ, ರೇಸ್ಕೋರ್ಸ್ ರಸ್ತೆ, ಸೆಂಟ್ರಲ್ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ, ಎಸ್.ಬಿ.ಎಂ. ವೃತ್ತ, ಮ್ಯೂಸಿಯಂ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರಬಾ ರಸ್ತೆ, ಹಡ್ಸನ್ ವೃತ್ತ, ಸಿದ್ದಲಿಂಗಯ್ಯ ವೃತ್ತ, ಆರ್.ಆರ್.ಎಂ.ಆರ್. ವೃತ್ತ, ಕಬ್ಬನ್ ಪಾರ್ಕ್ನ ಒಳಭಾಗ, ಪ್ರೆಸ್ಕ್ಲಬ್ ಮುಂಭಾಗ, ಬಾಲಭವನದ ಮುಂದೆ, ಲ್ಯಾವಲಿ ರಸ್ತೆ, ವಿಠ್ಠಲ್ ಮಲ್ಯ ರಸ್ತೆ.
ನಿಲುಗಡೆ ವ್ಯವಸ್ಥೆ: ಸಂತ ಜೋಸೆಫ್ ಇಂಡಿಯನ್ ಪ್ರೌಢಶಾಲೆ, ಕಂಠೀರವ ಕ್ರೀಡಾಂಗಣ, ಶಿವಾಜಿನಗರ ಬಸ್ ನಿಲ್ದಾಣ 1ನೇ ಮಹಡಿ, ಕೆಜಿಐಡಿ ಕಟ್ಟಡ.