ಡಿಕೆಶಿಗೆ ಬೆಂಬಲ: ಎಲ್ಲ ಘಟಕಗಳ ಪದಾಧಿಕಾರಿಗಳ ರಾಜಿನಾಮೆ
ರಾಮನಗರ: ಸಚಿವ ಸ್ಥಾನ ವಂಚಿತ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತಿರುವ ರಾಮನಗರ ಜಿಲ್ಲಾ ಕಾಂಗ್ರೆಸ್ನ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಚುನಾಯಿತ ಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆಯೊಂದಿಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮರಿದೇವರು, ಕೆಪಿಸಿಸಿ ಸದಸ್ಯ ಮತ್ತು ಮಾಗಡಿ ಪರಾಜಿತ ಅಭ್ಯರ್ಥಿ ಎ.ಮಂಜುನಾಥ್, ಕೆಪಿಸಿಸಿ ಸದಸ್ಯರಾದ ಕೆ.ರಮೇಶ್, ರಘುನಂದನ್ ರಾಮಣ್ಣ ಅವರ ರಾಜಿನಾಮೆ ಪತ್ರಗಳು ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಕೈ ಸೇರಿವೆ. ಜಿ.ಪಂ.ನ ಎಲ್ಲ 10 ಸದಸ್ಯರು, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು, ಪೌರ ಸಂಸ್ಥೆಗಳ 50ಕ್ಕೂ ಹೆಚ್ಚು ನೂತನ ಸದಸ್ಯರು, ಸಹಕಾರ ಸಂಸ್ಥೆಗಳ ಕಾಂಗ್ರೆಸ್ ಪ್ರತಿನಿಧಿಗಳು ಹಲವರು ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ. ಇನ್ನಷ್ಟು ಮಂದಿ ಮಂಗಳವಾರ ರಾಜಿನಾಮೆ ಸಲ್ಲಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಧ್ಯಕ್ಷರಿಂದಲೂ ಪದತ್ಯಾಗ: ಪಕ್ಷದ ಪದಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ರಾಜಿನಾಮೆಯನ್ನು ಸ್ವೀಕರಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯದ್ ಜಿಯಾವುಲ್ಲಾ ಕೂಡ ಸ್ವತಃ ತಮ್ಮ ರಾಜಿನಾಮೆ ಪತ್ರವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದಾರೆ.
ಮೊದಲ ಹಂತದಲ್ಲಿ ಪಕ್ಷದ ಪದಾಧಿಕಾರಿಗಳ ರಾಜಿನಾಮೆ ಪತ್ರಗಳೊಂದಿಗೆ ತಮ್ಮ ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಲು ಜಿಯಾವುಲ್ಲಾ ನಿರ್ಧರಿಸಿದ್ದಾರೆ. 2ನೇ ಹಂತದಲ್ಲಿ ಚುನಾಯಿತ ಪ್ರತಿನಿಧಿಗಳ ರಾಜಿನಾಮೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪಾದಯಾತ್ರೆಗೆ ಸಿದ್ಧತೆ: ಶಿವಕುಮಾರ್ ಅವರಿಗೆ ಸದ್ಯದಲ್ಲೇ ಸಚಿವ ಸ್ಥಾನ ನೀಡಬೇಕೆಂಬುದು ಜಿಲ್ಲಾ ಕಾಂಗ್ರೆಸ್ ಘಟಕದ ಒಕ್ಕೊರಲ ಬೇಡಿಕೆಯಾಗಿದೆ. ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ದಲ್ಲಿ ಶೀಘ್ರವೇ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಕೊಂಡೊಯ್ಯಲು ಜಿಲ್ಲಾ ಕಾಂಗ್ರೆಸ್ ತೀರ್ಮಾನಿಸಿದೆ.
ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, 2ನೇ ಹಂತದ ರಾಜಿನಾಮೆ ಪತ್ರಗಳನ್ನು ಸಲ್ಲಿಸಲಾಗುತ್ತದೆ. ನಂತರ ಜಿಲ್ಲೆ ಮತ್ತು ಬ್ಲಾಕ್ ಮಟ್ಟದ ಕಾಂಗ್ರೆಸ್ ಕಚೇರಿಗಳಿಗೆ ಬೀಗ ಜಡಿದು, ನಿರ್ಲಿಪ್ತರಾಗುವ ಬಗ್ಗೆ ಪಕ್ಷದ ಜಿಲ್ಲಾ ಮುಖಂಡರು ಚರ್ಚಿಸಿದ್ದಾರೆ.
ಬ್ಯುಸಿಯಾದ ಕಚೇರಿ: ಚುನಾವಣೆ ಫಲಿತಾಂಶದ ಬಳಿಕ ಖಾಲಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ ಭಾನುವಾರದಿಂದಲೇ ಬ್ಯುಸಿಯಾಗಿತ್ತು. ನೆಚ್ಚಿನ ನಾಯಕ ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದರಿಂದ ಅಸಮಾಧಾನಿತ ಮುಖಂಡರು ಬಿಡುವಿಲ್ಲದೆ ಚರ್ಚೆ ನಡೆಸಿ, ಸಾಮೂಹಿಕ ರಾಜಿನಾಮೆ ನಿರ್ಧಾರ ತಳೆದರು. ಭಾನುವಾರ ಮಧ್ಯಾಹ್ನದಿಂದಲೇ ರಾಜಿನಾಮೆ ಸ್ವೀಕಾರ ಪ್ರಕ್ರಿಯೆ ಸಾಗಿದೆ. ಜಿಲ್ಲಾಧ್ಯಕ್ಷ ಜಿಯಾವುಲ್ಲಾ, ಪರಾಜಿತ ಅಭ್ಯರ್ಥಿ ಮರಿದೇವರು ನೇತೃತ್ವದಲ್ಲಿ ರಾಜಿನಾಮೆ ಪತ್ರಗಳ ಸ್ವೀಕಾರ ನಡೆದಿದೆ. ಈ ವಿಷಯದಲ್ಲಿ ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟು ಮೆರೆದಿದೆ.