'ರಾಷ್ಟ್ರ ಚಿಂತನೆಯಿಲ್ಲದ ಯುವ ಸಮುದಾಯ ಅಪಾಯಕಾರಿ'
ದೊಡ್ಡಬಳ್ಳಾಪುರ: ದೇಶ ಚಿಂತನೆ ಇಲ್ಲದಯುವ ಸಮುದಾಯ ಅಪಾರ ಪ್ರಮಾಣದಲ್ಲಿ ಬೆಳೆಯುತ್ತಿರುವುದು ದುರಂತ ಎಂದು ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಸರ್ಕಾರಿ ಕಾಲೇಜು ಆವರಣದಲ್ಲಿ ಶ್ರೀಪುಷ್ಪಾಂಡಜಮುನಿ ಆಶ್ರಮ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ನಡೆದ ಯೋಗ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಹೆಚ್ಚಿನ ಭಾಗ ಯುವಕರನ್ನೇ ಹೊಂದಿದ್ದರೂ ಭಾರತ ಸ್ವಾಭಿಮಾನಿಯಾಗಿ ಬೆಳೆಯಲು ವಿಳಂಬವಾಗುತ್ತಿರುವುದಕ್ಕೆ ರಾಷ್ಟ್ರಚಿಂತನೆಯಿಲ್ಲದ ಜನರೇ ಕಾರಣ ಎಂದ ಅವರು, ದೇಶದ ಸಾಧು ಸಂತರು ಇಂದು ಸಾಮಾಜಿಕ ಆಂದೋಲನ ಮೂಲಕ ರಾಷ್ಟ್ರಹಿತ ಕಾಯುತ್ತಿರುವುದು ಗಣನೀಯ ಅಂಶ. ಬಾಬಾ ರಾಮದೇವರಂತಹ ಸಂತರು ಭ್ರಷ್ಟಾಚಾರದ ವಿರುದ್ಧ, ಕಪ್ಪುಹಣ ವಾಪಸ್ ತರುವಂತೆ ನಡೆಸಿದ ಆಂದೋಲನಗಳು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ ಎಂದರು.
ಶಿಬಿರದ ನೇತೃತ್ವ ವಹಿಸಿದ್ದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಯೋಗದಿಂದ ರೋಗಮುಕ್ತ ಸಮಾಜ ನಿರ್ಮಿಸುವ ಜೊತೆಗೆ ಸಾಮಾಜಿಕ ಸ್ಪಂದನೆಯುಳ್ಳ ನಾಗರಿಕರನ್ನು ತಯಾರು ಮಾಡುವುದು ಶಿಬಿರದ ಉದ್ದೇಶ ಎಂದರು. ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಜಿಲ್ಲಾ ಯುವ ಪ್ರಭಾರಿ ಆನಂದ್, ಯೋಗ ಶಿಕ್ಷಕ ಮಂಜುನಾಥ್ ಭಾಗವಹಿಸಿದ್ದರು.
ಭಾರತ್ ಸ್ವಾಭಿಮಾನ್ ಟ್ರಸ್ಟ್ ತಾಲೂಕು ಘಟಕದ ಪ್ರಭಾರಿಯಾಗಿ ಸೀತಾರಾಂ, ಕಾರ್ಯದರ್ಶಿಯಾಗಿ ಪಿ.ಕೆ.ಶ್ರೀನಿವಾಸ್, ಮಾಧ್ಯಮ ಪ್ರಭಾರಿಯಾಗಿ ಎಸ್.ಜಿ.ರಾಜೇಶ್ ಮುಕ್ಕೇನಹಳ್ಳಿ, ಯುವ ಪ್ರಭಾರಿಯಾಗಿ ಗಿರೀಶ್, ಕಾರ್ಯದರ್ಶಿಯಾಗಿ ಭರತ್ ಅವರನ್ನು ಆಯ್ಕೆ ಮಾಡಲಾಯಿತು.