ವಿಜೃಂಭಣೆಯ ವಾಸವಿ ಜಯಂತಿ
ರಾಮನಗರ: ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಆರ್ಯವೈಶ್ಯರು ವಿಜೃಂಭಣೆಯಿಂದ ಶ್ರೀ ವಾಸವಿ ಜಯಂತಿಯನ್ನು ಆಚರಿಸಿದರು.
ಪಾರ್ವತಿ ದೇವಿ ಆರ್ಯವೈಶ್ಯರ ಕುಲದೇವತೆಯಾಗಿ ಅವತಾರವೆತ್ತಿರುವ ಶ್ರೀ ವಾಸವಿ ಅಮ್ಮನವರ ಜಯಂತ್ಯುತ್ಸವದ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜೆ, ಹಾಲಿನ ಅಭಿಷೇಕ, ಅಲಂಕಾರ, ಹೋಮ, ಹವನಗಳು ಜರುಗಿದವು.
ಸೋಮವಾರ ವಾಸವಿ ಜಯಂತಿ ಅಂಗವಾಗಿ ಸುಮಂಗಲಿಯರು ತಂಬಿಟ್ಟಿನ ಆರತಿಯನ್ನು ದೇವಿಗೆ ಬೆಳಗಿ ಪ್ರಾರ್ಥಿಸಿದರು. ನಗರದ ಪ್ರಮುಖರ ರಸ್ತೆಗಳಲ್ಲಿ ಕೈಉತ್ಸವ ನಡೆಯಿತು. ಆರ್ಯ ವೈಶ್ಯ ಮಹಿಳೆಯರು ದೇವಿಯ ಉತ್ಸವ ಮೂರ್ತಿಯನ್ನು ತಮ್ಮ ಭುಜಗಳ ಮೇಲೆ ಹೊತ್ತು ನಡೆದರು.
ವಾಸವಿ ಮಹಿಳಾ ಮಂಡಳಿ ಸದಸ್ಯರು ಮಕ್ಕಳಿಗಾಗಿ ವಿವಿಧ ಸಾಂಸ್ಕಣತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ವಾಸವಿ ಅಮ್ಮನವರ ಬಗ್ಗೆ ಕ್ವಿಜ್ ಕಾರ್ಯಕ್ರಮವೂ ನಡೆಯಿತು. ವಾಸವಿ ಯೂತ್ ಫೋರಂನ ಪದಾಧಿಕಾರಿಗಳು ಮತ್ತು ಸದಸ್ಯರು ಜಯಂತಿ ಆಚರಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಆರ್ಯವೈಶ್ಯರು ಸೋಮವಾರ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ದೇವಾಲಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.