'ಸಾಹಿತ್ಯ, ಸಂಗೀತ, ಕಲೆ ಜನಸಾಮಾನ್ಯರಿಗೆ ತಲುಪವಂತಾಗಲಿ'
ಚನ್ನಪಟ್ಟಣ: ಸಾಹಿತ್ಯ, ಸಂಗೀತ, ಕಲೆ ಜನಸಾಮಾನ್ಯರಿಗೆ ತಲುಪವಂತಾಗಬೇಕು ಎಂದು ಪ್ರಗತಿಪರ ಚಿಂತಕ, ಕವಿ ಸುಬ್ಬು ಹೊಲೆಯಾರ್ ಹೇಳಿದರು.
ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಗಾನಗಂಗಾ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಲಯನ್ ವೆಂಕಟಸುಬ್ಬಯ್ಯಚೆಟ್ಟಿ ಹಾಗೂ ಡಾ.ಕೆ.ಪಿ.ಶೈಲಜಾ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಸಾಹಿತಿ, ಅಧ್ಯಾಪಕ ಸಿಸಿರಾರವರ ತಾಯಿನಾಡು ಕವನಸಂಕಲನ ಮತ್ತು ಸೃಜನ ಶೀಲ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಬುದ್ಧ-ಬಸವ-ಗಾಂಧಿ ಅಂಬೇಡ್ಕರ್ ಅವರ ಕಾಯಕ ಪ್ರಾಮಾಣಿಕತೆ, ಆದರ್ಶದ ಬದುಕಿನ ಕೆಲ ಅಂಶಗಳ ಬಗ್ಗೆ ಬೆಳಕು ಚೆಲ್ಲಿ ಅವರ ವಿಚಾರಧಾರೆ ಆದರ್ಶ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತ್ಯ, ಕಲೆ ಪಂಡಿತರಿಗಾಗಿ ಅಲ್ಲ, ಜನಸಾಮಾನ್ಯರಿಗೆ ತಲುಪವಂತಾಗಬೇಕು ಎಂದು ಪುನರುಚ್ಚರಿಸಿದ ಅವರು ಇಂದು ಎಷ್ಟೋ ಕೃತಿಗಳು ಹೊರಬರುತ್ತಿದ್ದರೂ ಅವು ಜನಸಾಮಾನ್ಯರನ್ನು ಮುಟ್ಟುವಲ್ಲಿ ವಿಫಲವಾಗುತ್ತಿವೆ. ಜನಸಾಮಾನ್ಯರ ನೋವು-ನಲಿವು ಕೃತಿಗಳಲ್ಲಿ ಪ್ರಕಟಗೊಂಡು ಸಮಾಜದ ಪರಿವರ್ತನೆಗೆ ಮುಂದಾಗುವಂತಾಗಬೇಕು ಎಂದು ಹೇಳಿ ಸಿಸಿರಾರವರ ಎರಡು ಕೃತಿಗಳು ಅಮೂಲ್ಯವಾದ ಕೃತಿಗಳಾಗಿದ್ದು ಜನತೆ ಅವುಗಳನ್ನು ಖರೀದಿಸಿ ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಸಿಸಿರಾ(ಎಸ್.ರಾಮಲಿಂಗೇಶ್ವರ)ಅವರ ವ್ಯಕ್ತಿತ್ವದ ಬಗ್ಗೆ ಪ್ರಶಂಸಾ ನುಡಿಗಳನ್ನು ಆಡಿ ಕನ್ನಡ ನಾಡಿನ ಕವಿಯಾಗಿ ಕಥೆಗಾರರಾಗಿ ವಿಮರ್ಶಕರಾಗಿ ಗಾಯಕರಾಗಿ ಸಮಾಜ ಮತ್ತು ಚಿಂತಕರಾಗಿ ಸಾಂಸ್ಕೃತಿಕ ಸಂಘಟಕರಾಗಿ ಯುವ ಬರಹಗಾರರ ಹಲವು ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವುದು ಕಲಾವಿದರು ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ಕನ್ನಡ ಸೇವೆ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅವರದು ಅನಿಕೇತನದ ಮನಸ್ಸು ಎಂದು ಶ್ಲಾಘಿಸಿ ಸಿಸಿರಾರವರಿಂದ ಮುಂದೆ ಉತ್ತಮ ಕೃತಿಗಳು ಹೊರ ಬರಲಿ, ಸಮಾಜದಲ್ಲಿ ಮತ್ತುಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ವಿಫಲ: ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಾಹಿತಿ ಶಿಕ್ಷಕ ಎಲೇಕೇರಿ ಶಿವರಾಂ ಮಾತನಾಡಿ ಅಧಿಕೃತವಾದ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಗಳಿದ್ದರೂ ಅಲ್ಲಿನ ಕೆಲ ಅಸಮರ್ಥರಿಂದ ಯುವ ಸಾಹಿತಿಗಳನ್ನು, ಗಟ್ಟಿ ಬರಹಗಾರರನ್ನು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ವಿಫಲರಾಗಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವಿಭಿನ್ನವಾಗಿ ಚಿಂತಿಸಿ ಯುವ ಸಾಹಿತಿಗಳೂ, ಬರಹಗಾರರು, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮ ನಿರಂತರವಾಗಿ ಸಾಗಲಿ, ಯುವ ಸಾಹಿತಿಗಳೂ ಕಲಾವಿದರ ಬೆಳವಣಿಗೆಗೆ ಪೂರಕವಾಗಿ ನಿಲ್ಲುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದತ್ತಿ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ವಚನಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಮತ್ತು ರಾಷ್ಟ್ರೀಯ ಮಟ್ಟದ ಯೋಗಪಟು ಶ್ರೀಮತಿ ಗೀತಾ ವೆಂಕಟೇಶ್ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಶೇ.95 ರಷ್ಟು ಅಂಕ ಪಡೆದ ನಿಸರ್ಗ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಅಳವಡಿಸಿಕೊಳ್ಳಿ: ದತ್ತಿ ಪ್ರಶಸ್ತಿ ಸ್ವೀಕಾರ ಮಾಡಿದ ಎಲ್ಲೇಗೌಡ ಬೆಸಗರಹಳ್ಳಿ ಮಾತನಾಡಿ ವಚನ ಸಾಹಿತ್ಯ ಯಾವುದೇ ಒಂದು ಜನಾಂಗದ ಸ್ವತ್ತಲ್ಲ. ಸಮಾಜದ ಎಲ್ಲ ಜನಾಂಗದ ಆಸ್ತಿ. ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್, ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತತ್ವ, ಆದರ್ಶ, ವಿಚಾರಧಾರೆಗಳನ್ನು ನಾವುಗಳೂ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ್ ವಿಕಾಸ್ ಪರಿಷತ್ ಕಣ್ವ ಶಾಖೆ ಅಧ್ಯಕ್ಷ ಹೆಚ್.ಮಂಜುನಾಥಮಾತನಾಡಿ ಇಂದು ಸಮಾಜದಲ್ಲಿ ಜಾತಿಯತೆ ಮೇಲು-ಕೀಳು, ಮನುಷ್ಯ ಮನುಷ್ಯರ ನಡುವೆ ವಿಷಬೀಜ ಬಿತ್ತುತ್ತಿರುವುದು ತೋರಿಕೆಗಾಗಿ ಮಾತನಾಡುತ್ತಿರುವುದು ಸಮಾಜದಲ್ಲಿನ ಅಸಮಾನತೆ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಜಾತೀಯತೆ ಮೇಲು-ಕೀಳು ಭೇದ-ಬಾವ ತೋರಿಕೆಗಾಗಿ ಮಾತನಾಡುವ ಕೀಳು ಮನೋಭಾವ ಸಮಾಜದ ಪ್ರತಿಯೊಬ್ಬರ ಮನೆ-ಮನದಿಂದ ದೂರವಾಗಬೇಕಾಗಿದೆ ಎಂದರು.
ಮತ್ತೊಂದು ದತ್ತಿ: ಮತ್ತೋರ್ವ ಮುಖ್ಯ ಅತಿಥಿ ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಲಯನ್ ವೆಂಕಟಸುಬ್ಬಯ್ಯಚೆಟ್ಟಿ ಮಾತನಾಡಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅರ್ಹಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲು ಹಾಗೂ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗುವ ನಿಟ್ಟಿನಲ್ಲಿ ಈಗ ನೀಡಿರುವ ಒಂದು ದತ್ತಿಯ ಜೊತೆಗೆ ಮತ್ತೊಂದು ದತ್ತಿಯನ್ನು ನೀಡುವುದಾಗಿ ಘೋಷಿಸಿ ಎರಡು ದತ್ತಿ ಹಣವನ್ನು ಬ್ಯಾಂಕಿನಲ್ಲಿ ದ್ವಿಗುಣಗೊಳ್ಳುವ ಠೇವಣಿ ಹಣವನ್ನಾಗಿ ಇಡಲಿ. ಕಾರ್ಯಕ್ರಮಕ್ಕೆ ಪ್ರತಿ ವರ್ಷ ನಮ್ಮ ಸಂಸ್ಥೆಯ ವತಿಯಿಂದ ಹಣ ನೀಡುವುದಾಗಿ ತಿಳಿಸಿ ಸಾಹಿತ್ಯ, ಸಾಂಸ್ಕೃತಿಕ ಸಮಾಜ ಸೇವೆಗಾಗಿ ನಮ್ಮ ಇಬ್ಬರು ಮಕ್ಕಳನ್ನು ತೊಡಗಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮಾತನಾಡಿ ಶಿಕ್ಷಣದಿಂದ ಸಮಾಜದಲ್ಲಿನ ಭೇದ-ಬಾವ ಎಂಬ ರೋಗವನ್ನು ಸಾಧ್ಯವಾದರಷ್ಟರ ಮಟ್ಟಿಗೆ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ರೂವಾರಿ ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಎಸ್.ರಾಮಲಿಂಗೇಶ್ವರ(ಸಿಸಿರಾ) ಕಾರ್ಯಕ್ರಮಕ್ಕೆ ಸಹಕಾರ ನೀಡಿ ಬೆಂಬಲಿಸಿಕೊಂಡು ಬರುತ್ತಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಟ್ರಸ್ಟ್ನ ನಿರ್ದೇಶಕ ಬಿ.ಎಸ್.ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನವನಿಧಿ ಜಾನಪದ ವಸ್ತುಕಾಶಿ ಮತ್ತು ಸಾಂಸ್ಕೃತಿಕ ಕಲಾಟ್ರಸ್ಟ್ ಅಧ್ಯಕ್ಷ ವಿಜಯ್ರಾಂಪುರ ಸ್ವಾಗತಿಸಿದರು. ಟ್ರಸ್ಟ್ನ ಸಂಚಾಲಕ
ವಸಂತ್ಕುಮಾರ್ ನಿರೂಪಣೆ ಮಾಡಿದರೆ ಬಿಂದುಶ್ರೀ ಸಿ.ಎನ್. ವಂದಿಸಿದರು. ಎಂ.ಜಿ.ಸತ್ಯನಾರಾಯಣ ದತ್ತಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು.
ಶ್ರೀಮತಿ ಶಾರದಾ ನಾಗೇಶ್, ಸಿಸಿರಾ, ಶಿವಾಜಿರಾವ್ ಅವರು ಬಸವಣ್ಣನವರ ವಚನ ಗಾಯನ ಹಾಗೂ ಶಂಕರ್ಬಾಬು ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.