26 ರಂದು ನೂತನ ವಜ್ರ ಖಚಿತ ಕಿರೀಟ ಧಾರಣೆ
ಕ.ಪ್ರ.ವಾರ್ತೆ , ಮಾಗಡಿ , ಮೇ 23
ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಮೇ 26 ರಂದು ಬೆಳಿಗ್ಗೆ 8 ಗಂಟೆಗೆ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿಯ ಮೂಲ ದೇವರ ಮುಡಿಗೆ ಸುಮಾರು 1 ಕೋಟಿ ರು. ವೆಚ್ಚದ ನೂತನ ವಜ್ರ ಖಚಿತ ಚಿನ್ನದ ಕಿರೀಟಧಾರಣೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದ್ದಾರೆ.
ಕಿರೀಟಧಾರಣೆ ಪ್ರಯುಕ್ತ 108 ಕುಟುಂಬಗಳಿಂದ ದೇವರಿಗೆ 108 ಸಾಲಿಗ್ರಾಮಗಳಿಂದ ಕೂಡಿದ ಹಾರ ಸಮರ್ಪಣೆ ಮತ್ತು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಧುರ ಕವಿ ಅಳ್ವಾರ್ - ಅಂಡಾಳ್ ತಂಡದಿಂದ ಆಳ್ವಾರುಗಳ ಸಾಲಾಯಿರಂ ದಿವ್ಯ ಪ್ರಬಂಧ ಗೋಷ್ಠಿ, ಮಾಗಡಿ ಶ್ರೀರಾಮಕೃಷ್ಣ ಶಾರದ ಸತ್ಸಂಗ ಕೇಂದ್ರದ ವತಿಯಿಂದ ಶ್ರೀವಿಷ್ಣು ಸಹಸ್ರಾ ನಾಮ ಪಾರಾಯಣ, ವಿದ್ವಾನ್ ರಾಜಗೋಪಲ್ ತಂಡದವರಿಂದ ನಾದಸ್ವರ ಮತ್ತು ಮಧ್ಯಾಹ್ನ 12.30ಕ್ಕೆ ಅಂಧ ಕಲಾವಿದರೊಂದಿಗೆ ಡಾ.ರಕ್ಷಾ ಕಾರ್ತೀಕ್ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಿದೆ. ಮೇಲುಕೋಟೆಯ ಮನವಾಳ ಮಾಮುನಿಗಳ್ ಮಠದ ಶಟಗೋಪ ರಾಮಾನುಜ ಜೀಯರ್ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀಗಳರಾದ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಓಂಕಾರ ಆಶ್ರಮದ ಮಹಾಸಂಸ್ಥಾನ ಟ್ರಸ್ಟ್‌ನ ಪೀಠಾಧಿಪತಿ ಮಧುಸೂದನಾಂದಪುರಿಸ್ವಾಮೀಜಿ, ಶಿವಗಂಗೆ ಮೇಲಣಗವಿ ವೀರ ಸಿಂಹಾಸನ ಸಂಸ್ಥಾನ ಮಠದ ಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ, ಶ್ರೀರಾಮಕೃಷ್ಣ ಯೋಗಾಶ್ರವುದ ಅಧ್ಯಕ್ಷ ಯೋಗೇಶ್ವರಾನಂದ ಸ್ವಾಮೀಜಿ, ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ರಾಮಚಂದ್ರ ಭಟ್ ಕೋಟೇಮನೆ ಇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ನಂದಕುಮಾರ್, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಉಪವಿಭಾಗಾಧಿಕಾರಿ ಎಂ.ಎನ್.ರಾಜೇಂದ್ರ ಪ್ರಸಾದ್, ಜಿಲ್ಲಾ ಎಸ್ಪಿ ಅನುಪಮ ಅಗರ್‌ವಾಲ್, ತಹಸೀಲ್ದಾರ್ ಡಾ.ಹರೀಶ್ ನಾಯಕ್ ಮತ್ತು ಟ್ರಸ್ಟಿ ಪದಾಧಿಕಾರಿಗಳು ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.