ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರ: 15 ಮಂದಿಗೆ ವಾಂತಿ, ಭೇದಿ
ನೆಲಮಂಗಲ: ಕುಡಿಯುವ ನೀರಿನ ಪೈಪ್ನಲ್ಲಿ ಚರಂಡಿ ನೀರು ಮಿಶ್ರಗೊಂಡು ಮನೆಗಳಿಗೆ ಕಲ್ಮಶ ನೀರು ಸರಬರಾಜಾದ್ದರಿಂದ ಆ ನೀರನ್ನು ಸೇವಿಸಿದ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸುಮಾರು ಹದಿನೈದು ಮಂದಿ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.
ಕೊಳವೆ ಬಾವಿಯಿಂದ ನೇರವಾಗಿ ನೀರನ್ನು ಮನೆಗಳ ಮುಂದೆ ಅಳವಡಿಸಿರುವ ಪೈಪ್ಗಳನ್ನು ಚರಂಡಿಗಳ ಮೂಲಕ ಹಾಕಿದ್ದಾರೆ. ಈ ಪೈಪ್ಗಳು ಸ್ವಲ್ಪ ಹಾಳಾದರೂ ಅದರ ಮೂಲಕ ಚರಂಡಿ ಸ್ವಲ್ಪ ಪ್ರಮಾಣದಲ್ಲಿ ಸೇರಿಕೊಳ್ಳುತ್ತದೆ. ಜನ ತಿಳಿಯದೆ ನೀರನ್ನು ಬಳಸಿರುವುದಿಂದ ಜನರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಸಾವಿರಾರು ರು.ಗಳನ್ನು ಖರ್ಚು ಮಾಡುವ ಅನಿವಾರ್ಯತೆ ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ದೊಡ್ಡ ಟ್ಯಾಂಕ್ ಮೂಲಕ ಗ್ರಾಮದ ಕೆಲ ಭಾಗಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ನಲ್ಲಿ ಮೂಲಕ ನೀರಿನ ಜೊತೆಗೆ ಹುಳುಗಳು ಬರುತ್ತಿವೆ.
ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿನಲ್ಲಿ ಈ ರೀತಿಯಲ್ಲಿ ಹುಳುಗಳು ಬರುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಸ್ಥಳೀಯ ಪಂಚಾಯ್ತಿ ಸದಸ್ಯರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ನೀರನ್ನು ಬಳಸುವುದು ನಮ್ಮ ಕರ್ಮವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿ ವಾಟರ್ ಟ್ಯಾಂಕ್ ಅನ್ನು ನೂತನವಾಗಿ ನಿರ್ಮಿಸಿ ಸುಮಾರು ಹತ್ತು ವರ್ಷವಾಗಿದೆ. ಅಂದಿನಿಂದಲೂ ಒಮ್ಮೆಯಾದರು ಈ ಟ್ಯಾಂಕ್ ಅನ್ನು ಶುಚಿಗೊಳಿಸಿಲ್ಲ. ಟ್ಯಾಂಕ್ನಲ್ಲಿನ ನೀರು ಹುಳುಗಳಿಂದಲೆ ತುಂಬಿ ಹೋಗಿದ್ದರೂ ಅದನ್ನು ಶುಚಿಗೊಳಿಸಲು ಯಾರೂ ಮುಂದಾಗುತ್ತಿಲ್ಲ.
ಮುಂದಾಗುತ್ತಿಲ್ಲ: ಆರೋಗ್ಯ ಇಲಾಖೆಯವರು ನೀರಿನ ಸ್ಥಿತಿಗತಿಯ ಬಗ್ಗೆ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ನೀರು ಸ್ವಚ್ಛಗೊಳಿಸಲು ಯಾರು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಜನರ ಹಿತ ರಕ್ಷಣೆಗೆ ಮುಂದಾಗಬೇಕಿದ್ದ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಸಹ ಮೌನವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.