ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ
ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲದೆ ಉಪಾಧ್ಯಕ್ಷ ಸ್ಥಾನಕ್ಕೂ ವಿವಿಧ ವರ್ಗಗಳ ಅಭ್ಯರ್ಥಿಗಳ ಪೈಪೋಟಿ ಜೋರಾಗಿದೆ. ಪ್ರಭಾವಿಗಳ ಮೇಲೆ ಒತ್ತಡ ಹೇರುವ ತಂತ್ರಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ. ಎಸ್ಸಿ ಅಥವಾ ಎಸ್ಟಿ ಮಹಿಳೆ ಅಧ್ಯಕ್ಷರಾದರೆ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ(ಎ) ಅಥವಾ ಸಾಮಾನ್ಯ ವರ್ಗಕ್ಕೆ ಮೀಸಲಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಕಳೆದ ಅವಧಿಯ ಮೊದಲ ಎರಡೂವರೆ ವರ್ಷ ಎಸ್ಸಿ(ಅಧ್ಯಕ್ಷ) ಮತ್ತು ಸಾಮಾನ್ಯ(ಉಪಾಧ್ಯಕ್ಷ) ಮೀಸಲಾತಿ, ನಂತರದ ಎರಡೂವರೆ ವರ್ಷ ಬಿಸಿಎಂ(ಬಿ)-ಅಧ್ಯಕ್ಷ, ಎಸ್ಸಿ-ಉಪಾಧ್ಯಕ್ಷ ಮೀಸಲಾತಿ ಇತ್ತು. ಹೀಗಾಗಿ ಅವಕಾಶ ಸಿಗದೇ ಇರುವ ವರ್ಗಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಹೆಚ್ಚಿದೆ.
ತುಂಬು ಗರ್ಭಿಣಿ ಶಂಕಾಸ್ಪದ ಸಾವು
ಕನಕಪುರ: ಕನಕಪುರ ಕಸಬಾ ಚೌಕಸಂದ್ರ ಗ್ರಾಮದಲ್ಲಿ ತುಂಬುಗರ್ಭಿಣಿಯೊಬ್ಬಳು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಳು (21) ಲಕ್ಷ್ಮೀಬಾಯಿ ಎಂಬಾಕೆ ಗಂಡ, ಅತ್ತೆ, ಮಾವಂದಿರ ಹಲ್ಲೆಯಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮೃತಳ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ. ಆರೋಪಿಗಳು ತಲೆತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಚೌಕಸಂದ್ರ ಗ್ರಾಮದ ಬಾಲರಾಜನಾಯ್ಕ ಎಂಬುವವನನ್ನು ವಿವಾಹವಾದ ಲಕ್ಷ್ಮೀಬಾಯಿಯೊಂದಿಗೆ ಕುಟುಂಬದವರು ಪ್ರತಿನಿತ್ಯ ಜಗಳ ನಡೆಸುತ್ತಿದ್ದರು. ಗಂಡಹೆಂಡಿರ ನಡುವೆ ಸಾಮರಸ್ಯ ಇರಲಿಲ್ಲ ಎಂದು ಸ್ಥಳೀಕರು ಹೇಳುತ್ತಾರೆ, ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಆರಕ್ಷಕ ಉಪನಿರೀಕ್ಷಕ ಚನ್ನಯ್ಯ ಹಿರೇಮಠ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೃತಳ ಗಂಡ ಬಾಲರಾಜನಾಯ್ಕ, ಮಾವ ಕೃಷ್ಣಾನಾಯ್ಕ, ಅತ್ತೆ ಅಮ್ಮೂಬಾಯಿ ಯವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಇಂದು ಹಳ್ಳಿಕಟ್ಟೆ ಎಂಬ ವಿನೂತನ ಕಾರ್ಯಕ್ರಮ
ಮಾಗಡಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಿಪ್ಪಸಂದ್ರ ಹೋಬಳಿ ಹೊನ್ನಾಪುರ ಗ್ರಾಮದಲ್ಲಿ ಹಳ್ಳಿಕಟ್ಟೆ ಎಂಬ ವಿನೂತನ ಕಾರ್ಯಕ್ರಮ ಮೇ.24 ರಂದು ಶುಕ್ರವಾರ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.
ಡಾ.ಶಿವಕುಮಾರಸ್ವಾಮೀಜಿ ಯುವಕರ ಸೇವಾ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಅವರ ಮನೆಯಂಗಳದಲ್ಲಿ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಮಹಂತೇಶ್ವರ ಡಿಎಡ್ ಕಾಲೇಜಿನ ಪ್ರಾಂಶುಪಾಲ ಕಾಂತರಾಜ್ ಉದ್ಘಾಟಿಸಲಿದ್ದಾರೆ. ತಾಲೂಕು ಕನ್ನಜ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ. ದಯಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುಂಡಿಗೆರೆ ಬಸವರಾಜು ತಿಳಿಸಿದರು.
ನಮ್ಮ ನಡೆ ಹಳ್ಳಿ ಕಡೆ ಎಂಬ ವಿಷಯವನ್ನು ಕುರಿತು ಆಯುರ್ವೇದ ವೈದ್ಯ ಡಾ. ಮಹದೇವ್ ಉಪನ್ಯಾಸ ನೀಡಲಿದ್ದಾರೆ. ಗ್ರಾ.ಪಂ. ಸದಸ್ಯ ಚನ್ನಪ್ಪ ದೇವರು,ರಂಗಸ್ವಾಮಿ, ರುದ್ರರಾಧ್ಯ, ರಂಗಸ್ವಾಮಯ್ಯ, ಜಿಲ್ಲಾ ಕಸಾಪ ಘಟಕದ ಚಂದ್ರಶೇಖರ್, ಕು.ಮು.ದಯಾನಂದ್, ಸಿಂಗ್ರಿಗೌಡ, ಅನ್ನಮ್ಮ ಇತರರು ಭಾಗವಹಿಸಲಿದ್ದಾರೆ.
ಸೌಹಾರ್ದ ಸಹಕಾರ ಸಂಘ ಉದ್ಘಾಟನೆ ಇಂದು
ದೊಡ್ಡಬಳ್ಳಾಪುರ: ಭರತಭೂಮಿ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ-ದೊಡ್ಡಬಳ್ಳಾಪುರದ ಇದರ ಪ್ರಾರಂಭೋತ್ಸವ ಸಮಾರಂಭ ಮೇ 24ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕೊಂಗಾಡಿಯಪ್ಪ ಮುಖ್ಯರಸ್ತೆಯ ಶ್ರೀಬಸವೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸತೀಶ್ಚಂದ್ರ ಉದ್ಘಾಟಿಸಲಿದ್ದು, ಭರತಭೂಮಿ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷೆ ಪುಷ್ಪಾ ಶಿವಶಂಕರ್ ಅಧ್ಯಕ್ಷತೆ ವಹಿಸುವರು. ರಾಜ್ಯ ಸಹಕಾರಿ ನಿರ್ದೇಶಕ ಕೃಷ್ಣಾರೆಡ್ಡಿ, ರಮೇಶ್, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.
ದೇಗುಲದಲ್ಲಿ ತಿರು ಕಲ್ಯಾಣೋತ್ಸವ
ಸೂಲಿಬೆಲೆ: ಇಲ್ಲಿಗೆ ಸಮೀಪದ ಯನಗುಂಟೆ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ತಿರು ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಮೇ 22ರಿಂದ ಹಮ್ಮಿಕೊಂಡಿದ್ದು,ಎರಡು ದಿನಗಳ ಕಾಲ ನಡೆಯಲಿದೆ.
ಜೂನ್ನಲ್ಲಿ ಶಿಕ್ಷಕರ ಸಂಘದ ಚುನಾವಣೆ?
ಸೂಲಿಬೆಲೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆ ಜೂನ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇರುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ರಾಜ್ಯ ಸರ್ಕಾರಿ ನೌಕರರು ಸದಸ್ಯ ಶುಲ್ಕವನ್ನು ತಮ್ಮ ವೇತನದ ಎಚ್ಆರ್ಎಂಎಸ್ ಮೂಲಕ ತೆಗೆದುಕೊಂಡು, ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಾತೆಗೆ ಜಮಾ ಮಾಡಿಸುವುದು.ಇದರಿಂದ ಜೂನ್ನಲ್ಲಿ ನಡೆಯುವ ಚುನಾವಣಿಯಲ್ಲಿ ಸ್ವರ್ಧಿಸುವುದು ಹಾಗೂ ಮತ ಚಲಾಯಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ನೌಕರರ ಸಂಘದ ಸಂಘಟನೆ ಕಾರ್ಯದರ್ಶಿ ಹಾಗೂ ಹೊಸಕೋಟೆ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ವಿ ಶ್ರೀಕಾಂತ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಮಾಗಡಿ: ಪ್ರಸುತ್ತ 2013-2014 ನೇ ಸಾಲಿಗೆ ಮಾಗಡಿ ತಾಲೂಕಿನ ಮೆಟ್ರಿಕ್ ಪೂರ್ವ ಬಿಸಿಎಂ ಹಾಸ್ಟೆಲ್ಗಳಿಗೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗ-1, 2ಎ, ಎಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಗಳ ವಿದ್ಯಾರ್ಥಿನಿಗಳಿಗೆ ಶೇ.75 ಮತ್ತು ಶೇ.25 ರ ಅನುಪಾತದಲ್ಲಿ ಪ್ರವೇಶ ನೀಡಲಾಗುವುದು. ಹಾಸ್ಟೆಲ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಹಾಸಿಗೆ, ಹೊದಿಕೆ, ಬಿಸಿನೀರು, ಪುಸ್ತಕ, ಲೇಖನಿ ಸಾಮಗ್ರಿಗಳು, ಸ್ನಾನಕ್ಕೆ ಬಿಸಿನೀರು, ಸೋಪು, ತಲೆಗೆ ಎಣ್ಣೆ, ಟೂತ್ ಪೇಸ್ಟ್ ಹಾಗೂ ಇತರೆ ಮೂಲಭೂತ ಸೌಲತ್ತುಗಳನ್ನು ನೀಡಲಾಗುವುದು. ಮಾಗಡಿ ಟೌನ್, ಮಾಡಬಾಳ್, ಅಜ್ಜನಹಳ್ಳಿ, ತಗ್ಗೀಕುಪ್ಪೆಯಲ್ಲಿ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿದ್ದು, ತಗ್ಗೀಕುಪ್ಪೆ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವೂ ಸಹ ಇರುತ್ತದೆ. ಹಾಸ್ಟೆಲ್ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಆಯಾ ಹಾಸ್ಟೆಲ್ನ ಮೇಲ್ವಿಚಾರಕರಿಂದ ಅರ್ಜಿ ನಮೂನೆ ಪಡೆದು ತಮ್ಮ ಪೂರ್ಣ ವಿಳಾಸ ಹಾಗೂ ಶಾಲಾ ದಾಖಲಾತಿಗಳೊಂದಿಗೆ ಜೂ.10 ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ವಿಸ್ತರಣಾಧಿಕಾರಿಗಳು ತಾಪಂ. ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.