ನೆಲಮಂಗಲದಲ್ಲಿ ಕುಡಿವ ನೀರಿಗೆ ಹಾಹಾಕಾರ
ನೆಲಮಂಗಲ: ತಾಲೂಕಿನಲ್ಲಿ ಈ ಬಾರಿಯ ಬೇಸಿಗೆ ಬಿಸಿಲ ಜಳ ಹೆಚ್ಚಾಗಿದ್ದು 30 ರಿಂದ 38 ಡಿಗ್ರಿ ಉಷ್ಣಾಂಶ ದಾಖಲಿಸಿದೆ. ಬಿಸಿಲು ಹೆಚ್ಚಾದ ಕಾರಣ ಹಳ್ಳಿ ಮತ್ತು ನಗರಗಳಲ್ಲಿ ಕುಡಿಯುವ ನೀರು ಮತ್ತು ದನಗಳಿಗೆ ಮೇವಿಗಾಗಿ ರೈತರು, ಅಧಿಕಾರಿಗಳ ಪರದಾಟ ಹೇಳತೀರದಂತಾಗಿದೆ.
ಬಿತ್ತನೆಗೆ ಸಮಯ ಹತ್ತಿರವಾಗುತ್ತಿರುವುದರಿಂದ ಮಳೆಯನ್ನೆ ಕಾಯುತ್ತಿರುವ ರೈತರಿಗೆ ಮಳೆಯದೇ ಜಪವಾಗಿದೆ. ಇನ್ನು ಕೃಷಿ ಇಲಾಖೆ ಬಿತ್ತನೆಗೆ ಸಂಬಂಧಿಸಿದ ಅವಶ್ಯವಾದ ಬಿತ್ತನೆ ಬೀಜ, ರಸಗೊಬ್ಬರ ವ್ಯವಸಾಯ ಉಪಕರಣಗಳನ್ನು ಸನ್ನದ್ಧಗೊಳಿಸಿಕೊಂಡಿದ್ದಾರೆ.
ಮಳೆ: ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲೂಕಿನಲ್ಲಿ ವಾಡಿಕೆ ಮಳೆ 125 ಮಿ. ಮಿ ಮೀರಬೇಕು. ಆದರೆ ಈ ಬಾರಿ ಸರಾಸರಿ 160 ಮಿ ಮೀ, ಮಳೆ ಬಂದಿದ್ದು ವಾಡಿಕೆಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಮಳೆ ಬಂದಿದೆ.
ಪೂರ್ವ ಮುಂಗಾರು ಹಂಗಾಮಿನಲ್ಲಿ ಬರುವ ಮಳೆಯನ್ನೇ ಆಶ್ರಯಿಸಿಕೊಂಡು ಮೆಕ್ಕೆಜೋಳ, ತೊಗರಿ, ಹಲಸಂದೆ, ಅವರೆ, ಶೇಂಗ, ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಬೇಕಾಗಿತ್ತು. ಮಳೆಯ ಕೊರತೆಯಿಂದ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬಿತ್ತನೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟು ಬೇಸಾಯ ಭೂಮಿ: ತಾಲೂಕಿನಲ್ಲಿ ಒಟ್ಟು 2000 ಹೆಕ್ಟರ್ ಭೂ ಪ್ರದೇಶದಲ್ಲಿ ಬಿತ್ತನೆ ಆಗಬೇಕು. ಪೂರ್ವ ಮುಂಗಾರು ಹಂಗಾಮಿನಲ್ಲಿ ಕೇವಲ 120 ಹೆಕ್ಟರ್ ಬಿತ್ತನೆ ಪೈಕಿ 72 ಹೆಕ್ಟರ್‌ನಲ್ಲಿ ತೊಗರಿ, 9 ಹೆಕ್ಟರ್ ಅಲಸಂದೆ, 6 ಹೆಕ್ಟರ್ ಅವರೆ, 6 ಹೆಕ್ಟರ್ ಶೇಂಗ, 1 ಹೆಕ್ಟರ್ ಸೂರ್ಯಕಾಂತಿ ಬಿತ್ತನೆಯಾಗಿದೆ.
ಬಿತ್ತನೆ ಬೀಜ ದಾಸ್ತಾನು: ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಎಲ್ಲಾ ರೀತಿಯ ಬಿತ್ತನೆ ದಾನ್ಯಗಳನ್ನು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ 50 ಕ್ವಿಂಟಾಲ್, ತೊಗರಿ 25 ಕ್ವಿಂಟಾಲ್, ಮುಸುಕಿನ ಜೋಳ 45 ಕ್ವಿಂಟಾಲ್, ಸೂರ್ಯಕಾಂತಿ , ಶೇಂಗಾ 22 ಕ್ವಿಂಟಾಲ್ ಈ ಧಾನ್ಯಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ವಿಶೇಷವಾಗಿ ಈ ಬಾರಿ ಹೊಸ ತಳಿ-ಎಂ.ಎಲ್.365 ತಳಿ, ಎಂ.ಎಲ್.75 ಹೊಸ ತಳಿಯ ರಾಗಿಯನ್ನು ಪರಿಚಯಿಸುತ್ತಿದ್ದೇವೆ. ಈ ರಾಗಿ ಹೆಚ್ಚಿನ ಮೇವು, ಕಾಳು ಬೆಳವಣಿಗೆಯಲ್ಲಿ ರೋಗ ಬಾಧೆ, ಕೀಟ ಬಾಧೆಯಿಂದ ರಕ್ಷಿಸಿಕೊಳ್ಳುವ ವಿಶೇಷ ಗುಣವಿದೆ ಎನ್ನುತ್ತಾರೆ ತಾಲೂಕಿನ ಕೃಷಿ ಅಧಿಕಾರಿ ಎಂ.ಎಲ್.ಲಕ್ಷ್ಮೀನಾರಾಯಣ್.
ರಸಗೊಬ್ಬರ ದಾಸ್ತಾನು : ರೈತರಿಗೆ ಅವಶ್ಯಕತೆ ಇರುವಷ್ಟು ರಸಗೊಬ್ಬರವನ್ನು ತಾಲೂಕಿನ ದಾಬಸ್‌ಪೇಟೆ,
ತ್ಯಾಮಗೊಂಡ್ಲು ಮತ್ತು ಕಸಬಾ ಹೋಬಳಿಯ ರಸಗೊಬ್ಬರ ದಾಸ್ತಾನು ಮಳಿಗೆ ಮತ್ತು ಲೈಸನ್ಸ್ ಹೊಂದಿರುವ ಮಾರಾಟಗಾರರ ಮಳಿಗೆಗಳಲ್ಲಿ ಎಲ್ಲಾ ವಿಧದ ಗೊಬ್ಬರ ಮತ್ತು ಕೀಟನಾಶಕ ಔಷಧಗಳು ದಾಸ್ತಾನು ಗೊಳಿಸಿದೆ. ಈ ರಸಗೊಬ್ಬರ ಮಾರಾಟದ ಬಗ್ಗೆಯೂ ಹೆಚ್ಚಿನ ಜಾಗರೂಕತೆಯನ್ನು ಸಹ ವಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.