ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಕುಡಿಯುವ ನೀರಿನ ಅಭಾವ

Vishwanath S
Updated On : 24 May 2013, 12:36 pm

ಹೊಸಕೋಟೆ: ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನೀರಿನ ತೀವ್ರ ಅಭಾವ ಎದ್ದುಕಾಣುತ್ತಿದೆ. ಆಸ್ಪತ್ರೆಗೆ ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಪುರಸಭೆಯನ್ನೇ ಅವಲಂಬಿಸುವಂತಾಗಿದೆ. ತುರ್ತುಸಂದರ್ಭಗಳಲ್ಲಿ ಹಣ ಪಾವತಿಸಿ ಟ್ಯಾಂಕರ್ ಮೂಲಕ ನೀರು ಪಡೆಯಲಾಗುತ್ತಿದೆ. ಇದರಿಂದಾಗಿ ಒಳರೋಗಿಗಾಳಗಿ ದಾಖಲಾಗಲು ರೋಗಿಗಳು ಹಿಂಜರಿಯುತ್ತಿದ್ದಾರೆ.
 ಅನಿವಾರ್ಯವಾಗಿ ದಾಖಲಾದವರು ಸಹ ಶೀಘ್ರದಲೇ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದಾರೆ. ಆವರಣದಲ್ಲೇ ಸಿಬ್ಬಂದಿ ವಸತಿ ಗೃಹಗಳು ಸಹ ಇರುವುದರಿಂದ ಬಹಳಷ್ಟು ಬಾರಿ ವೆಚ್ಚವನ್ನು ಹಂಚಿಕೊಂಡು ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಾರೆ. ಆದರೆ, ಪ್ರತಿದಿನ ಆಸ್ಪತ್ರೆ ಸ್ವಚ್ಛಗೊಳಿಸಲು, ಒಳರೋಗಿಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಪ್ರತಿದಿನ 180-200 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಹೆರಿಗೆಗಾಗಿ ದಾಖಲಾದವರು ಕನಿಷ್ಠ ಮೂರುರಿಂದ ಏಳು ದಿನಗಳಕಾಲ ಒಳರೋಗಿಗಳಾಗಿ ಇರಬೇಕಾಗುತ್ತದೆ.
  ಸರಕಾರ ಕೂಡಲೇ ನೀರಿನ ಸಮಸ್ಯೆ ಪರಿಹರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಆವರಣದಲ್ಲಾಗಲ್ಲೀ ಸುತ್ತಮುತ್ತಲಿನ ಸರಕಾರಿ ಜಾಗದಲ್ಲಾಗಲಿ ಕೊಳವೆ ಬಾವಿ ಕೊರೆದು ಸಂಪರ್ಕ ನೀಡಿದರೆ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿರುವ ಹೆಚ್ಚಿನ ಬಡಜನರಿಗೆ ಅನುಕೂಲವಾಗಲಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸಹ ಸಾಧ್ಯವಾಗಲಿದೆ.
ಸಾರಿಗೆ ಸೌಲಭ್ಯ: ಆಸ್ಪತ್ರೆ ಪಟ್ಟಣದಿಂದ ಸುಮಾರು ಒಂದು ಕಿ.ಮೀ.ನಷ್ಟು ದೂರದಲ್ಲಿದೆ. ಸಮರ್ಪಕವಾದ ಸಾರಿಗೆ ಸೌಲಭ್ಯ ಲಭ್ಯವಿಲ್ಲದ ಕಾರಣ ರೋಗಿಗಳು ಆಟೋಗಳನ್ನೇ ಅವಲಂಬಿಸುವಂತಾಗಿದೆ. ಆಸ್ಪತ್ರೆಗೆ ಹೋಗಿಬರಲು ಆಟೋಗಾಗಿ ಕನಿಷ್ಠ 50 ರು. ವ್ಯಯಿಸಬೇಕಿದೆ. ಪರ್ಯಾಯವಾಗಿ ಬೆಂಗಳೂರಿನಿಂದ ಪಟ್ಟಣಕ್ಕೆ ಸಂಚರಿಸುವ ಕೆಲವು ಬಿಎಂಟಿಸಿ ಬಸ್‌ಗಳನ್ನು ಸರಕಾರಿ ಆಸ್ಪತ್ರೆಯವರೆವಿಗೂ ವಿಸ್ತರಿಸಿದಲ್ಲಿ ಪ್ರಯೋಜನವಾಗಲಿದೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಸಾರಿಗೆ  ಸಂಸ್ಥೆಯ ಆಧಿಕಾರಿಗಳಿಗೆ ಬಹಳಷ್ಟು ಬಾರಿ ಮನವಿ ಮಾಡಿದ್ದಾಗ್ಯೂ ಕಾರ್ಯರೂಪಕ್ಕೆ ಬಂದಿಲ್ಲ. ಇದೇ ರೀತಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಘಟಕಕ್ಕಾಗಿ ಸುಮಾರು ಎರಡು ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡು ಈಗಾಗಲೇ ಸುಮಾರು ಐದು ವರ್ಷಗಳು ಕಳೆದಿದ್ದರೂ  ಕಾರ್ಯಾರಂಭಗೊಂಡಿಲ್ಲ. ತಾಲೂಕು ಕೇಂದ್ರವೆಂದು ಹಾಗೂ ರಾಷ್ಟೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭವಿಸುವ ಅಪಘಾತಗಳನ್ನು ಪರಿಗಣಿಸಿ ಹಿಂದೆ ಇದ್ದ 30 ಹಾಸಿಗೆಗಳಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜಿಗೇರಿಸುವ ಸಲುವಾಗಿ ಸರಕಾರ ಕಟ್ಟಡ ನಿರ್ಮಿಸಿದ್ದರೂ ಸಿಬ್ಬಂದಿ, ಸೌಲಭ್ಯಗಳ ಕೊರತೆಯ ಕಾರಣದಿಂದಾಗಿ ಪ್ರಾರಂಭವಾಗಿಲ್ಲ. ಹೀಗಾಗಿ ಸರಕಾರದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.    ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಎಲ್ಲಾ ವಿಭಾಗಗಳ ವೈದ್ಯರನ್ನು ನೇಮಕ ಮಾಡಬೇಕು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು, ಬಡಜನರು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಟ್ಟು ಸರಕಾರದ ಯೋಜನೆ ಸಾರ್ಥಕಗೊಳಿಸಲು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement