ಇಂದು ಯಕ್ಷಗಾನ ನಾಟಕ
ದೊಡ್ಡಬಳ್ಳಾಪುರ: ಮೇ 25ರಂದು ರಾತ್ರಿ ಸಪ್ತ ಮಾತೃಕ ಮಾರಿಯಮ್ಮ ದೇವಿ ಕರಗದ ಪ್ರಯುಕ್ತ ದ್ರೌಪದಿ ವಸ್ತ್ರಾಪಹರಣ ಅಥವಾ ದುಶ್ಯಾಸನ ವಧೆ ಹೆಸರಿನ ಯಕ್ಷಗಾನ ನಾಟಕವನ್ನು ಆಯೋಜಿಸಲಾಗಿದೆ. ವಿಘ್ನೇಶ್ವರ ಬಾಲಕ ಭಕ್ತ ಮಂಡಳಿಯವರು ನಗರದ ತೂಬಗೆರೆ ಪೇಟೆ ಸರ್ಕಲ್‌ನಲ್ಲಿ ರಾತ್ರಿ 9.30 ಗಂಟೆಗೆ ಈ ಯಕ್ಷಗಾನ ನಾಟಕವನ್ನು ಅಭಿನಯಿಸಲಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಎ.ಎಚ್. ಸುಬ್ರಮಣಿ, ಎ.ಎಸ್. ಶ್ಯಾಮಸುಂದರ್, ಎಂ. ಮುನಿರಾಜು, ರಾಮಚಂದ್ರಪ್ಪ, ಗಂಗಾಧರ ರಾಯರು, ಇ. ಗಿರೀಶ, ಪಿ. ಅರಸಪ್ಪ, ಡಿ.ಸಿ. ಜಗದೀಶ, ಎಂ.ಎಲ್. ಶ್ರೀನಿವಾಸ, ವಿಶ್ವನಾಥ ಅಭಿನಯಿಸಲಿದ್ದಾರೆ.ಮುಮ್ಮೇಳ ಮತ್ತು ಹಿಮ್ಮೇಳಗಳ ಭಾಗವತರಾಗಿ ಡಿ.ಎನ್. ಗಂಗಾಧರಪ್ಪ, ಕೆ.ಎಸ್. ಗುರುಪ್ರಸಾದ್, ಎನ್. ಕೃಷ್ಣಮೂರ್ತಿ, ಕೆ. ಲಕ್ಷ್ಮೀಕಾಂತ, ಎ. ನಟರಾಜ್ ಕುಮಾರ್, ಡಿ.ಆರ್. ನಟರಾಜ್, ಎಂ.ಪಿ. ನಾಗರಾಜ್ ಪಾಲ್ಗೊಳ್ಳುವರು. ವಾದ್ಯವೃಂದದ ತಾಡಿಪಾಳ್ಯ ವೆಂಕಟಪ್ಪ, ಡಿ.ಎಲ್. ರಾಜಣ್ಣ ನಡೆಸಿಕೊಡುವರು. ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಬೇಕೆಂದು ಮಂಡಳಿಯವರು ಕೋರಿದ್ದಾರೆ.
ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ
ಚನ್ನಪಟ್ಟಣ: ಮಾನಸಿಕವಾಗಿ ನೊಂದ ಗೃಹಿಣಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪೂರ್ಣಿಮಾ(25) ಮೃತ ದುರ್ದೈವಿ. ದೊಡ್ಡಮಳೂರಿನವರಾದ ಈಕೆಯನ್ನು ಕಳೆದ ಮೂರುವರ್ಷಗಳ ಹಿಂದೆ ಕೋಟಮಾರನಹಳ್ಳಿಯ ಪ್ರಕಾಶ್ ಎಂಬುವರಿಗೆ ಕೊಟ್ಟು ವಿವಾಹ ಮಾಡಿ ಕೊಡಲಾಗಿತ್ತು. ಕೆಲದಿನಗಳ ಹಿಂದೆ ವಿಷಸೇವಿಸಿದ್ದ ಈಕೆಯನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಪೂರ್ಣಿಮ ಕೊನೆಯುಸಿರೆಳೆದಿದ್ದಾಳೆ. ಮೃತಳ ಪೋಷಕರು ಇದು ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದ ಸಾವಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ದಾಸ್ತಾನು: ಸೀಮೆಎಣ್ಣೆ ವಶ
ಚನ್ನಪಟ್ಟಣ: ಅಕ್ರಮವಾಗಿ ದಾಸ್ತಾನಿಡಲಾಗಿದ್ದ 20 ಸಾವಿರ ರು. ಮೌಲ್ಯದ ಸೀಮೆ ಎಣ್ಣೆಯನ್ನು ಪೂರ್ವ ಪೊಲೀಸ್ ಠಾಣೆಯ ಕ್ರೈಮ್ ತಂಡ ದಾಳಿ ಮಾಡಿ ವಶಪಡಿಸಿ ಕೊಂಡಿರುವ ಘಟನೆ ಪಟ್ಟಣದ ಇಸ್ಲಾಂ ಪುರದಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕ್ರೈಂ ಪಿಎಸ್‌ಐ ಶರತ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ ತಂಡ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡಿದ ಬ್ಯಾರಲ್ ಸೀಮೆಎಣ್ಣೆಯನ್ನು ವಶಕ್ಕೆ ತೆಗೆದು ಕೊಂಡು, ಆಹಾರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆಫ್ರಿಕಾದ ಬಾಲಕಿಗೆ ನವಜೀವನ ನೀಡಿದ ನಾರಾಯಣ
ಆನೇಕಲ್ಲು: ಬ್ರೈನ್ ಸ್ಟೆಮ್ ಗ್ಲಿಯೋವಾ ಎಂಬ ಕಾಯಿಲೆಯಿಂದ ಬಳಲುತಿದ್ದ ಆಫ್ರಿಕಾದ 8 ವರ್ಷದ ಬಾಲಕಿಗೆ ಆನೇಕಲ್ ಸಮೀಪದ ನಾರಾಯಣ ಹೃದಯಾಲಯ ಮಜುಂದಾರ್ ಷಾ ಕ್ಯಾನ್ಸರ್ ಸೆಂಟರ್‌ನ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿ ನವ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್ ತಜ್ಞ ಡಾ. ಸಂದೀಪ್ ಜೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯರ ತಂಡದ ಸಾಧನೆ ಮಾಹಿತಿ ನೀಡಿದರು. 2 ವರ್ಷಗಳ ಹಿಂದೆ ಆಫ್ರಿಕಾದ ಹೆಣ್ಣು ಮಗುವೊಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಯಿತು. ದೇಹದ ಹಲವು ಅಂಗಗಳ ಮೇಲೆ ಸಮತೋಲನ ಕಳೆದುಕೊಂಡು ನಿಲ್ಲುವುದೇ ಸಾಧ್ಯವಾಗುತ್ತಿರಲಿಲ್ಲ. ನರಮಂಡಲದ ವ್ಯವಸ್ಥೆ ನಿಯಂತ್ರಣ ತಪ್ಪಿ ಪಂಚೇಂದ್ರಿಯಗಳೂ ನಿಷ್ಕ್ರಿಯವಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿರುವ ರೋಗಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಬ್ರೈನ್ ಸ್ಟೆಮ್ ಗ್ಲಿಯೋವಾ ಎನ್ನಲಾಗುವುದು. ಬ್ರೈನ್ ಸ್ಟೆಮ್ ಎಂಬುದು ಬೆನ್ನೆಲುಬಿಗೆ ಹೊಂದಿಕೊಂಡಂತೆ ಕತ್ತಿನ ಮೇಲ್ಗಡೆ ಇರುತ್ತದೆ. ಇದು ನಮ್ಮ ದೇಹದ ಉಸಿರಾಟ, ಹೃದಯದ ಬಡಿತ, ನರಮಂಡಲದ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಸ್ಟೆಮ್ ವ್ಯವಸ್ಥೆ ಏರು ಪೇರಾದಾಗ ಗ್ಲಿಯೋವಾ ಸ್ಥಿತಿ ಉಂಟಾಗುತ್ತದೆ. ಸತತ ಎರಡು ವರ್ಷ ಕಾಲ ಆಸ್ಪತ್ರೆಯ ವೈದ್ಯಕೀಯ ತಂಡ ಮಾಡ್ಯುಲೇಟೆಡ್ ರೇಡಿಯೋ ಶಸ್ತ್ರ ಚಿಕಿತ್ಸೆ ಹಾಗೂ ರೇಡಿಯೋ ಥೆರಫಿಯಂತಹ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಅಪರೂಪದ ಸವಾಲಾಗಿದ್ದಿತು. ನಾರಾಯಣ ಹೃದಯಾಲಯ ವೈದ್ಯರ ತಂಡ ಇಂತಹ ಕ್ಲಿಷ್ಟಕರ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆ ಸಾಧನೆಗೈದು ವಿಶ್ವ ದರ್ಜೆ ಚಿಕಿತ್ಸೆಯಲ್ಲಿ ಭಾರತದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಕೃತಜ್ಞತೆ: ಮಗುವಿನ ತಾಯಿ ಆಫ್ರಿಕಾ ನಿವಾಸಿ ಐಡೋಲ್ ಮಾತನಾಡಿ ನನ್ನ ಮಗುವಿನ ಉತ್ತಮ ಪರಿಸ್ಥಿತಿಗೆ ಕಾರಣರಾದ ಡಾ.ಸಂದೀಪ್ ಜೈನ್ ಮತ್ತು ಡಾ. ತಿಮ್ಮಪ್ಪ ಹೆಗ್ಗಡೆರವರಿಗೆ ಕೃತಜ್ಞತೆ ಸಲ್ಲಿಸಿ ಮಗುವಿಗೆ ಮರು ಜೀವ ನೀಡಿದ್ದಕ್ಕಾಗಿ ಚಿರಋಣಿಯಾಗಿರುತೇನೆ ಎಂದರು.
ಬೀಗ ಮುರಿದು ಚಿನ್ನಾಭರಣ ಕಳವು
ಕೆಜಿಎಫ್: ದೇವಸ್ಥಾನದ ಬೀಗವನ್ನು ಮುರಿದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 4 ತಿಂಗಳ ಹಿಂದೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಓಂಕಾರೇಶ್ವರ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿ, ಶಿವಲಿಂಗ ಮತ್ತು ಪಾರ್ವತಿ ದೇವರ ಮೇಲೆ ಹಾಕಿದ್ದ ಸುಮಾರು 14000 ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಎಂ.ಮೋಹನ್ ದೂರು ನೀಡಿದ್ದಾರೆ.