ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿಕೆಶಿ ಕಳಂಕಿತರಲ್ಲ: ಶ್ರೀನಿವಾಸ್ ಪ್ರಸಾದ್

Vishwanath S
Updated On : 24 May 2013, 11:40 am

ಕ.ಪ್ರ. ವಾರ್ತೆ ,  ಚನ್ನಪಟ್ಟಣ ,  ಮೇ 24
ಡಿ.ಕೆ.ಶಿವಕುಮಾರ್ ಕಳಂಕಿತರಲ್ಲ ಅವರ ಮೇಲಿರುವುದು ಕೇವಲ ಆರೋಪ. ಮುಂದಿನ ದಿನಗಳಲ್ಲಿ ಇವರನ್ನು ಸಂಪುಟಕ್ಕೆ ಸೇರ್ಪಡೆ ಗೊಳಿಸುವ ಸಂಬಂಧ  ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕ್ರಿಮಿನಲ್ ಮೊಕದ್ದಮೆ ಹೊಂದಿರುವವರಿಗೆ ಅವಕಾಶ ನೀಡಬಾರದೆಂದು ಹೈಕಮಾಂಡ್ ನಿಲುವು ತಳೆದಿರುವುದರಿಂದ ಈ ಸಂಗತಿಯಲ್ಲಿ ಕೆಲ ಗೊಂದಲಗಳಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸುಗಮವಾಗಿ ಬಗೆಹರಿಯಲಿವೆ ಎಂದರು.
ಸದ್ಯದಲ್ಲೇ ಮರಳು ನೀತಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಯ ವಿರುದ್ಧ ದನಿ ಎತ್ತಿದ ಸಚಿವರು ಕಂದಾಯ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದರೆ ಅದು ಅಕ್ರಮ, ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.
ಸ್ಥಳೀಯವಾಗಿ ಮರಳಿನ ಅಗತ್ಯತೆ ಇದೆ ಎಂಬ ಸಂಗತಿಯನ್ನು ನಮ್ಮ ಸರ್ಕಾರ ಮನಗಂಡಿದ್ದು ಸದ್ಯದಲ್ಲೇ ಮರಳು ನೀತಿಯನ್ನು ಜಾರಿಗೆ ತರಲಿದ್ದು ಮುಖ್ಯ ಮಂತ್ರಿಗಳು ಮತ್ತು ಲೋಕೋಪಯೋಗಿ ಸಚಿವರು ಮರಳು ನೀತಿ ಜಾರಿಗೆ ತರುವಲ್ಲಿ ಉತ್ಸುಕರಾಗಿದ್ದು ಅಲ್ಲಿಯವರೆಗೆ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ ಎಂದರು.
ರುದ್ರಭೂಮಿಗೆ ಆದ್ಯತೆ: ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಮಂಜೂರು ಮಾಡುವ ಬಗ್ಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ, ರುದ್ರ ಭೂಮಿಗೆ ಸ್ಥಳ ಇಲ್ಲದ ಗ್ರಾಮಗಳಲ್ಲಿ ಖಾಸಗಿ ಭೂಮಿಯನ್ನು ಖರೀದಿ ಮಾಡಲು ಮುಂದಾಗಿದ್ದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸದ್ಯದಲ್ಲೇ ಉನ್ನತ ಮಟ್ಟದ ಸಭೆ ಕರೆದು ಈಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ದಲಿತರು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಪ್ರತ್ಯೇಕ ಸ್ಮಶಾನ ನೀಡಲಿದ್ದು ಈ ಜಿಲ್ಲೆಯಲ್ಲಿ ಸ್ಮಶಾನ ಇಲ್ಲದ ಗ್ರಾಮಗಳಿಗೆ ಈ ಯೋಜನೆ ಜಾರಿಗೆ ಬಂದ ಬಳಿಕ  ಪರಿಹಾರ ಸಿಗಲಿದೆ ಎಂದರು.
ಹೇಮಾವತಿ ನೀರಿಗೆ ಮನವಿ: ಜಿಲ್ಲೆಯ ಎಲ್ಲಾ ಜಲಾಶಯಗಳು ಬರಿದಾಗಿದ್ದು ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಕಷ್ಟವಾಗಿದ್ದು ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಆದ್ದರಿಂದ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವಂತೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಸಚಿವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಮುಂದಿನ ತಿಂಗಳು ಮಳೆ ಬೀಳಲಿದ್ದು ಅಲ್ಲಿಯವರೆಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಟಲ್‌ಜಿ ಜನಸ್ನೇಹಿ ಕೇಂದ್ರಗಳ ಬಗ್ಗೆ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಸಿದ್ಧತೆ ಹಾಗೂ ಜಿಲ್ಲೆಯ ಸಮಸ್ಯೆ ಮತ್ತು ಪ್ರಗತಿಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಬಹುಮುಖ್ಯವಾಗಿ ವೃಷಭಾವತಿ ನದಿ ತ್ಯಾಜ್ಯದಿಂದ ಬಿಡದಿ ಹೋಬಳಿಯಲ್ಲಾಗುತ್ತಿರುವ ಮಾಲಿನ್ಯದ ಬಗ್ಗೆ ಸಚಿವರಿಗೆ ಮನದಟ್ಟು ಮಾಡಿ ಕೊಟ್ಟು ಸೂಕ್ತ ಪರಿಹಾರದ ಭರವಸೆ ಪಡೆದರು.
ಸಭೆಗೆ ಆಗಮಿಸಿದ ಸಚಿವರನ್ನು ತಾಲೂಕು ಕಾಂಗ್ರೆಸ್ ಮುಖಂಡರು ಅಭಿನಂದಿಸಿ ಶುಭಕೋರಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ದಲಿತ ಮುಖಂಡರುಗಳಾದ ಸಿದ್ದರಾಮಯ್ಯ, ಎಸ್.ಸಿ.ಶೇಖರ್, ತಾ.ಪಂ.ಸದಸ್ಯ ಹನುಮಂತಯ್ಯ, ನಗರಸಭೆ ಸದಸ್ಯ ವಿಷಕಂಠಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಉಪವಿಭಾಗಾಧಿಕಾರಿ ಡಾ.ರಾಜೇಂದ್ರಪ್ರಸಾದ್, ತಹಸೀಲ್ದಾರ್‌ಗಳಾದ ಡಾ.ದಯಾನಂದ್, ದಾಕ್ಷಾಯಿಣಿ, ಇಓ ರವಿಕುಮಾರ್, ಎಇಇ ನಾಟೇಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement