ದೊಡ್ಡಬಳ್ಳಾಪುರ ಸಂಭ್ರಮದಿಂದ ನಡೆದ ಹಸಿಕರಗ
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ಮೇ 24
ಇಲ್ಲಿನ ವಹ್ನಿಗರಪೇಟೆಯಲ್ಲಿರುವ ಶ್ರೀಸಪ್ತಮಾತೃಕೆ ಮಾರಿಯಮ್ಮ ದೇವಿ ದೇವಾಲಯದಲ್ಲಿ ವೈಭವದ ಹಸಿಕರಗ ಮಹೋತ್ಸವ ಶುಕ್ರವಾರ ಬೆಳಗಿನಜಾವ ಸಂಭ್ರಮದಿಂದ ನಡೆಯಿತು. ಬೆಳಗಿನಜಾವ 4 ಗಂಟೆಗೆ ಆರಂಭವಾದ ಹಸಿಕರಗ ಮಹೋತ್ಸವ 8 ಗಂಟೆಗೆ ಮುಕ್ತಾಯವಾಯಿತು.
ದೇವಾಲಯದಿಂದ ಹೊರಟ ಕರಗ ಹೊರುವ ಪೂಜಾರಿ ಬೇತಮಂಗಲದ ಬಿ.ವೈ.ನಾರಾಯಣಸ್ವಾಮಿ, ಗಗನಾರ್ಯ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಗಳ ನಂತರ ಕೆಂಪು ವಸ್ತ್ರ ಮತ್ತು ಮಲ್ಲಿಗೆ ಪೂವು ಮತ್ತು ಸರ್ವಾಭರಣಗಳಿಂದ ಅಲಂಕೃತವಾದ ಹಸಿಕರಗವನ್ನು ಕಂಕುಳಲ್ಲಿ ಹೊತ್ತು ಆಕರ್ಷಕ ನೃತ್ಯದೊಂದಿಗೆ ಸಂಚರಿಸಿದರು. ಹೊಸಕರಗದ ದೇವಾಲಯ, ಜಯಚಾಮರಾಜೇಂದ್ರವೃತ್ತ, ನೆಲದಾಂಜನೇಯಸ್ವಾಮಿ ದೇವಾಲಯ ಮಾರ್ಗವಾಗಿ ವಹ್ನಿಗರ ಪೇಟೆಯಲ್ಲಿರುವ ಮಾರಿಯಮ್ಮ ದೇವಿ ದೇವಾಲಯಕ್ಕೆ ಹಸಿಕರಗ ಉತ್ಸವ ನಡೆಯಿತು. ಏಳುಸುತ್ತಿನ ಕೋಟೆ ಮತ್ತು ಆಸ್ಪತ್ರೆ ವೃತ್ತದಲ್ಲಿ ಆಕರ್ಷಕ ನೃತ್ಯ ಗಮನ ಸೆಳೆಯಿತು. ನಸುಕಿನಲ್ಲೇ ಕರಗ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಹಲವರು ಪೂಜೆ ಸಲ್ಲಿಸಿ ಹಸಿಕರಗಕ್ಕೆ ಶುಭಹಾರೈಸಿದರು.
ಇಂದು ಕರಗ ಮಹೋತ್ಸವ: ದೊಡ್ಡಬಳ್ಳಾಪುರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀಸಪ್ತಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ಮೇ 25ರ ಶನಿವಾರ ರಾತ್ರಿ ಸಂಭ್ರಮದಿಂದ ನಡೆಯಲಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕರಗ ಮಹೋತ್ಸವಕ್ಕೆ ಭರದ ಸಿದ್ಧತೆಗಳು ಪೂರ್ಣಗೊಂಡಿವೆ. ಶನಿವಾರ ರಾತ್ರಿ 10.45ಕ್ಕೆ ದೇವಾಲಯದಿಂದ ಕರಗ ಹೊರಡಲಿದ್ದು, ನೇರವಾಗಿ ಹಳೇ ಬಸ್ ನಿಲ್ದಾಣಕ್ಕೆ ಬಂದು ಸೇರಲಿದೆ. ಅಲ್ಲಿ ವಿವಿಧ ದೇವತಾ ಉತ್ಸವಗಳು ಇರಲಿದ್ದು, ದೇವತೆಗಳ ಸಮ್ಮುಖದಲ್ಲಿ ವಿಶೇಷ ಕರಗನೃತ್ಯ ಏರ್ಪಾಟಾಗಿದೆ. ಕರಗದ ಅಂಗವಾಗಿ ಶ್ರೀರಾಮಲಿಂಗ ಚೌಡೇಶ್ವರಿ, ನೆಲದಾಂಜನೇಯ, ಅಭಯಚೌಡೇಶ್ವರಿ, ಮಹಾಲಕ್ಷ್ಮಿ, ಜನಾರ್ದನಸ್ವಾಮಿ, ವಿನಾಯಕ, ಸೋಂಭೇಶ್ವರ, ಧರ್ಮರಾಯಸ್ವಾಮಿ, ಸಪ್ತಮಾತೃಕೆ ಮಾರಿಯಮ್ಮ ಸೇರಿದಂತೆ ಅನೇಕ ದೇವತಾ ಉತ್ಸವಗಳು ರಾತ್ರಿಯಿಡೀ ನಡೆಯಲಿವೆ.
ಕರಗದ ಅಂಗವಾಗಿ ತೂಬಗೆರೆ ಪೇಟೆ ವೃತ್ತದಲ್ಲಿ ನಾಟಕ ಪ್ರದರ್ಶನ, ಬೆಸ್ತರಪೇಟೆಯ ವೃತ್ತದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ವಿಶೇಷ ಪೂಜಾ ಕಾರ್ಯಕ್ರಮ, ಮಾರುಕಟ್ಟೆ ಪ್ರದೇಶದಲ್ಲಿ ಪಾಂಡುರಂಗಸ್ವಾಮಿ ಪೂಜಾ ಕಾರ್ಯಕ್ರಮ ಸೇರಿದಂತೆ ವಿವಿದೆಡೆ ಅರವಂಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿವೆ. ಕರಗದ ನಂತರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಏಳುಸುತ್ತಿನ ಕೋಟೆ ಆವರಣದಲ್ಲಿ ಒನಕೆ ನೃತ್ಯ ಮತ್ತು ವಸಂತೋತ್ಸವ ನಡೆಯಲಿದೆ.