ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ
ಹೊಸಕೋಟೆ: ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯ ರಾಮಕೃಷ್ಣ ಮುಖ್ಯ ರಸ್ತೆಯಲ್ಲಿರುವ ಅಕ್ವಾ ಶೈನ್ ಎಂಬ ನೀರು ಶುದ್ಧೀಕರಣ ಘಟಕದ ಮೇಲೆ ಗ್ರಾಮಾಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಘಟಕವು ಯಾವುದೇ ಅನುಮತಿ ಪಡೆಯದೆ, ಅಂಗಿಕೃತ ಸಂಸ್ಥೆಯಿಂದ ನೀರು ಶುದ್ಧೀಕರಣಕ್ಕಾಗಿ ನಿಗದಿ ಪಡಿಸಿರುವ ನಿಯಮಗಳನ್ನು ಪಾಲಿಸದೆ ಕ್ಯಾನ್ಗಳಲ್ಲಿ ತುಂಬಿ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದೆ, ಬೇಸತ್ತು ಜಿಲ್ಲಾ ಜಾಗೃತ ದಳಕ್ಕೆ ದೂರು ನೀಡಲಾಗಿತ್ತು. ಘಟಕದಲ್ಲಿ ನೀರನ್ನು ಸಂಸ್ಕರಣ ಮಾಡದೆ ನೇರವಾಗಿ ಕೊಳವೆ ಬಾವಿಯಿಂದ ಪಡೆದ ನೀರನ್ನು ಕ್ಯಾನ್ಗಳಿಗೆ ತುಂಬಿ ಸೀಲ್ ಹಾಕಲಾಗುತ್ತಿತ್ತು. ಇದರಿಂದ ನೀರಿನ ಗುಣಮಟ್ಟವೂ ಕುಂಠಿತ ಗೊಳ್ಳುತ್ತಿದ್ದುದಷ್ಟೆ ಅಲ್ಲದೇ, ಬಳಸುವ ಗ್ರಾಹಕರ ಆರೋಗ್ಯದ ಮೇಲೂ ದುಷ್ಟರಿಣಾಮ ಉಂಟು ಮಾಡುತ್ತಿತ್ತು. ಕೇವಲ ಘಟಕದ ಮಾಲೀಕರನ್ನಷ್ಟೇ ಅಲ್ಲದೆ ಮಾರಾಟಗಾರರ ಮೇಲೂ ಕಠಿನ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಗ್ರಾಹಕರು ಒತ್ತಾಯಿಲಿದ್ದಾರೆ.