ಬೊಂಬೆನಗರಿಗೂ ಕುಡಿವ ನೀರಿನ ಸಮಸ್ಯೆ
ಚನ್ನಪಟ್ಟಣ: ಬೆಂಗಳೂರು ಮಹಾನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬೊಂಬೆನಗರಿಗೂ ವ್ಯಾಪಿಸುವ ಲಕ್ಷಣಗಳು ಸ್ಪಷ್ಟಗೊಂಡಿದ್ದು, ಮಹಾನಗರಕ್ಕೆ ನೀರು ನಿಲ್ಲುತ್ತಿದ್ದಂತೆ ಇಲ್ಲಿನ ನಾಗರಿಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಗೊಂಡಿದೆ.
ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು, ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ನೀರನ್ನೇ ಅವಲಂಬಿಸಿದ್ದು ಬೆಂಗಳೂರು ನಗರಕ್ಕೆ ನೀರು ಸ್ಥಗಿತಗೊಂಡರೆ ಇಲ್ಲಿಗೂ ನೀರಿಲ್ಲದಂತಾಗುತ್ತದೆ.
ಬೆಂಗಳೂರು ನೀರುಸರಬರಾಜು ಮಂಡಲಿ ಕೊಳವೆ ಶುದ್ಧೀಕರಣದ ಉದ್ದೇಶದಿಂದ ಹಿಂದಕ್ಕೆ ಪಂಪ್ ಮಾಡುವ(ಬ್ಯಾಕ್ ವಾಷ್) ನೀರನ್ನು ಅವಳಿನಗರಗಳಿಗೆ ಪೂರೈಕೆ ಮಾಡುತ್ತಿದ್ದು, ಮಹಾನಗರಕ್ಕೆ ನೀರು ನಿಲುಗಡೆ ಯಾದಲ್ಲಿ ಬ್ಯಾಕ್ವಾಷ್ ಪ್ರಕ್ರಿಯೆ ಸ್ಥಗಿತಗೊಂಡು ಬೊಂಬೆನಗರಿಯ ಜನತೆ ನೀರಿನ ಕೊರತೆ ಎದುರಿಸ ಬೇಕಾದ ಪರಿಸ್ಥಿತಿ ನಿರ್ಮಾಣ ಗೊಳ್ಳಲಿದೆ.
ಇನ್ನು 8 ದಿನ ಮಾತ್ರ: ಕೆಆರ್ಎಸ್ ಖಾಲಿಯಾಗುತ್ತಿದ್ದು ಇನ್ನು ಎಂಟುದಿನಗಳಲ್ಲಿ ಬೆಂಗಳೂರಿಗೆ ನೀರುಪೂರೈಕೆ ಬಂದ್ ಆಗಲಿದೆ ಎಂದು ಜಲಮಂಡಲಿ ಅಧಿಕಾರಿಗಳು ವಿವರಣೆ ನೀಡುತ್ತಿದ್ದು ಅಲ್ಲಿಗೆ ನೀರು ನಿಂತರೆ ತೊರೆಕಾಡನಹಳ್ಳಿಯಲ್ಲಿ ನೀರಿಲ್ಲದೆ ನೀರು ಪೂರೈಕೆ ಕಾರ್ಯ ಸ್ಥಗಿತಗೊಳ್ಳಲಿದೆ. ರಾಮನಗರ ಚನ್ನಪಟ್ಟಣ ಸೇರಿದಂತೆ ಕುಡಿಯುವ ನೀರಿನ ಕೊಳವೆ ಹಾದು ಹೋಗುವ ಮಾರ್ಗದ 10ಕ್ಕೂ ಹೆಚ್ಚು ಗ್ರಾಮಗಳು ಕಾವೇರಿ ನೀರನ್ನೇ ಆಶ್ರಯಿಸಿದ್ದು ಎಲ್ಲಾಕಡೆ ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.
ಮಳೆರಾಯನಿಗೆ ಮೊರೆ: ಕುಡಿಯುವ ನೀರಿನ ಸಮಸ್ಯೆ ಎದುರಿಸುವುದು ಹೇಗೆಂದು ಕಂಗಾಲಾಗಿರುವ ನೀರು ಸರಬರಾಜು ಮಂಡಲಿ ಮಳೆರಾಯನಿಗೆ ಮೊರೆ ಹೋಗಿದ್ದು ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಮನ್ಸೂನ್ ಕರಾವಳಿ ಮತ್ತು ಘಟ್ಟಪ್ರದೇಶಗಳಿಗೆ ಕಾಲಿರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಅದರಂತೆ ಮಳೆ ಬಂದರೆ ನೀರು ಸರಬರಾಜು ಮಂಡಲಿ ಜಲಗಂಡಾಂತರದಿಂದ ಪಾರಾದಂತೆ.
ನೀರು ಪೂರೈಸಲು ಕ್ರಮ: ಇಲ್ಲವಾದಲ್ಲಿ ಬೆಂಗಳೂರು ಜಲಮಂಡಲಿ ಯಾವ ಹೆಜ್ಜೆಯನ್ನಿರಿಸಲಿದೆ ಎಂಬುದನ್ನು ಆಧರಿಸಿ ಮುಂದಿನ ತೀರ್ಮಾನ ತಳೆಯಲು ಇಲ್ಲಿನ ಅಧಿಕಾರಿಗಳು ನಿರ್ಧರಿಸಿದ್ದು, ಮಳೆ ಬರದಿದ್ದರೂ ರಾಜಧಾನಿಯ ನಿವಾಸಿಗಳಿಗೆ ನೀರು ಪೂರೈಕೆ ಮಾಡಲು ಯಾವುದಾದರೂ ಕ್ರಮ ಜಲಮಂಡಲಿ ಕೈಗೊಳ್ಳಲಿದೆ ಎಂಬ ನಂಬಿಕೆ ಇಲ್ಲಿನ ಅಧಿಕಾರಿಗಳದ್ದಾಗಿದೆ.
20 ಎಂಎಲ್ಡಿ ನೀರು ಬೇಕು: ರಾಮನಗರ ಮತ್ತು ಚನ್ನಪಟ್ಟಣಕ್ಕೆ ನೀರು ಪೂರೈಕೆ ಮಾಡುತ್ತಿರುವ ಜಲಮಂಡಲಿಗೆ 20ಎಂಎಲ್ಡಿ ನೀರಿನ ಅಗತ್ಯತೆ ಇದ್ದು ಈ ಪೈಕೆ 15 ಎಂಎಲ್ಡಿ ನೀರು ಸಿಗುವುದೇ ದುಸ್ಥರವೆನಿಸಿದೆ.
ಸ್ಥಳೀಯವಾಗಿ ತೋಡಿಸಿರುವ ಕೊಳವೆ ಬಾವಿಗಳು, ರಾಮನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಮಂಚನಬೆಲೆ ಜಲಾಶಯಗಳಿಂದ ಅಲ್ಪ ಪ್ರಮಾಣದ ನೀರನ್ನು ಸಂಗ್ರಹಿಸಬಹುದಾಗಿದೆಯಾದರೂ ಹೆಚ್ಚಿನ ಪ್ರಮಾಣದ ನೀರಿಗೆ ಕಾವೇರಿಯನ್ನು ಆಶ್ರಯಿಸಲೇ ಬೇಕಿದೆ.
ಕಾವೇರಿ ನೀರು ಸ್ಥಗಿತಗೊಂಡಿದ್ದೇ ಆದಲ್ಲಿ ಬೊಂಬೆನಗರಿ ತುಂಬೆಲ್ಲ ಕೊರೆಸಿರುವ ಕೊಳವೆಬಾವಿಗಳೇ ಜನತೆಗೆ ಅನಿವಾರ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಜಲಮಂಡಲಿ ಅಧಿಕಾರಿಗಳಿಗೆ ಸವಾಲಿನ ಸಂಗತಿಯಾಗಿದೆ.
ಖಾಲಿ ಖಾಲಿ
ಚನ್ನಪಟ್ಟಣಕ್ಕೆ ತೊರೆಕಾಡನಹಳ್ಳಿ ಯಿಂದ ಪೂರೈಕೆಯಾಗುವ ನೀರು ಮೂಲಾಧಾರವಾಗಿದ್ದು, ಶಿಂಷಾ ಮತ್ತು ಬೆಂಗಳೂರು ಜಲಮಂಡಲಿ ಹಿಂದಕ್ಕೆ ಕಳುಹಿಸುವ ಬ್ಯಾಕ್ ವಾಷ್ ನೀರನ್ನು ಬಳಸಿ ಇಲ್ಲಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು.
ಫೆಬ್ರವರಿ ತಿಂಗಳ ವೇಳೆಗೆ ಶಿಂಷನದಿ ಬರಿದಾಗಿದ್ದು ಅಲ್ಲಿಂದ ಒಂದೇ ಒಂದು ಹನಿ ನೀರು ಸಿಗದಾಗಿದೆ. ಇತ್ತ ಕೆಆರ್ಎಸ್ ಜಲಾಶಯದಿಂದ ಬೆಂಗಳೂರಿಗೆ ಪೂರೈಕೆ ಮಾಡುವ ಬ್ಯಾಕ್ ವಾಷ್ ನೀರನ್ನು ಬಳಕೆ ಮಾಡಲಾಗುತ್ತಿದ್ದು ಇದು ಕೆಲವೇ ಕೆಲವು ದಿನಗಳಲ್ಲಿ ಖಾಲಿಯಾಗುವುದರಿಂದ ಮುಂದೇನು ಎಂಬ ಚಿಂತೆ ಅಧಿಕಾರಿಗಳದ್ದಾಗಿದೆ.
-ಸು.ನಾ.ನಂದಕುಮಾರ್