ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ಕ.ಪ್ರ. ವಾರ್ತೆ , ಮಾಗಡಿ , ಮೇ 24
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಭಕ್ತಜನ ಸಾಗರದೊಂದಿಗೆ ಸಡಗರ ಸಂಭ್ರಮದಿಂದ ಶುಕ್ರವಾರ ನೆರವೇರಿತು.
ಬ್ರಹ್ಮರಥೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ರಥದಲ್ಲಿ ಉಭಯಮ್ಮನವರ ಸಮೇತ ಶ್ರೀಲಕ್ಷ್ಮೀನರಸಿಂಹಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದರು. ಶಾಸ್ತ್ರೋತ್ತವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಅರ್ಚಕರು ನೆರವೇರಿಸಿದರು. ರಾಜ್ಯ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ನಂತರ ರಥಕ್ಕೆ ಬಾಳೆಹಣ್ಣು, ಧವನ ಎಸೆದು, ರಥ ಎಳೆಯುವ ಮೂಲಕ ತಮ್ಮ ಇಷ್ಟಾರ್ಥವನ್ನು ಪ್ರಾರ್ಥಿಸಿ ಪುನೀತರಾದರು.
ರಥೋತ್ಸವ ಅಂಗವಾಗಿ ರಥ ಬೀದಿಗಳಲ್ಲಿ ಸೇವಕರು ಭಕ್ತರಿಗೆ ಕೊಸಂಬರಿ, ಪಾನಕ, ಮಜ್ಜಿಗೆ ವಿತರಿಸಿದರು. ಚಾರಣಪ್ರಿಯರು ಸಾವನದುರ್ಗದ ಏಕಶಿಲಾ ಬೆಟ್ಟ ಏರಿ ಸಾಹಸ ಮೆರೆದರು. ಕೆಪಿಸಿಸಿ ಸದಸ್ಯ ಎ.ಮಂಜು, ಬಿಜೆಪಿ ಪರಾಜಿತ ಅಭ್ಯರ್ಥಿ ಜಗದೀಶ್ ಪ್ರಸಾದ್, ಪುರಸಭಾ ಸದಸ್ಯರಾದ ಎಂ.ಎನ್. ಮಂಜು, ಕೆ.ವಿ.ಬಾಲು, ಸುಶೀಲಮ್ಮ, ಎಪಿಎಂಸಿ ಮಾಜಿ ನಿರ್ದೇಶಕ ಎಂ. ಜಯಕುಮಾರ್, ರವೀಶ್, ಪುರುಷೋತ್ತಮ್, ರುದ್ರೇಶ್, ಲೋಕೇಶ್, ವಿಜಯಕುಮಾರ್, ನಿವೃತ್ತ ಪಿಎಸ್ಐ ನಾಯಕನಪಾಳ್ಯದ ರಂಗಪ್ಪ, ಗವಿನಾಗಮಂಗಲ ನರಸಿಂಹಯ್ಯ, ರಂಗನರಸಿಂಹಯ್ಯ ಸೇರಿದಂತೆ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬ್ರಹ್ಮರಥೋತ್ಸವದ ಪ್ರಯುಕ್ತ ವಿವಿಧ ಸಮಾಜದವರಿಂದ ಅನ್ನಸಂತರ್ಪಣೆ ಅರವಂಟಿಕೆ ಏರ್ಪಡಿಸಲಾಗಿತ್ತು.