ಕಲಾವಂತಿಕೆಯ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯ
ದೊಡ್ಡಬಳ್ಳಾಪುರ: ಸಾಂಸ್ಕೃತಿಕ ಕಲಾವಂತಿಕೆಯ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿದೆ. ಸಾಂಸ್ಕೃತಿಕ ಪ್ರತಿಭೆಗೆ ಇತ್ತೀಚಿನ ದಿನಗಳಲ್ಲಿ ಸಿಗುತ್ತಿರುವ ಪ್ರೋತ್ಸಾಹ ಗಣನೀಯವಾಗಿದ್ದು ಅದಕ್ಕೆ ಪೂರಕವಾಗಿ ರಂಗ ಮಂದಿರ ಮತ್ತು ಕಲಾ ವೇದಿಕೆಗಳು ನಿರ್ಮಾಣವಾಗಬೇಕು ಎಂದು ಹಿರಿಯ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ರಾತ್ರಿ ನಡೆದ ಶ್ರೀಇಡಗುಂಜಿ ಮಹಾಗಣಪತಿ ನೃತ್ಯ ಸಂಸ್ಥೆಯ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದಂತಹ ಪ್ರದೇಶಗಳಲ್ಲಿ ಇಂದು ಈ ಬಗೆಯ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲೇಬೇಕಾದ ಅನಿವಾರ್ಯತೆ ಇದೆ. ಆಧುನಿಕತೆಯ ಭರಾಟೆಯಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರುವ ನಾವು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉಳಿಸಿಕೊಳ್ಳಬೇಕಾದರೆ ನೃತ್ಯ-ಸಂಗೀತ ಅತಿಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್, ದೃಶ್ಯ ಮಾಧ್ಯಮದ ಭರಾಟೆಯ ನಡುವೆಯೂ ನಮ್ಮ ಸಾಂಸ್ಕೃತಿಕ ಪರಂಪರೆ ಬೆಳೆದುಬರುತ್ತಿರುವುದು ಸಂತಸದ ವಿಚಾರ. ಮಕ್ಕಳು ಮತ್ತು ಯುವಕರು ಇದರಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿಕೊಳ್ಳುತ್ತಿರುವುದು ಗಣನೀಯ. ದೊಡ್ಡಬಳ್ಳಾಪುರದಲ್ಲಿ ಸುಸಜ್ಜಿತ ರಂಗಮಂದಿರವೊಂದನ್ನು ನಿರ್ಮಾಣ ಮಾಡುವ ಕನಸು ಆದಷ್ಟು ಬೇಗ ಕೈಗೂಡಲಿ ಎಂದರು.
ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್ ಮಾತನಾಡಿ, ಕಲೆಯ ಅನನ್ಯತೆಯನ್ನು ನೋಡುವ ದೃಷ್ಟಿ ಅತ್ಯಂತ ಸಂಕುಚಿತವಾಗುತ್ತಿದೆ. ಲಾಭ ಅಥವಾ ವ್ಯಾಪಾರಿ ದೃಷ್ಟಿಕೋನದಿಂದ ನೃತ್ಯ, ಸಂಗೀತ, ಸಾಹಿತ್ಯವನ್ನು ಅಭ್ಯಾಸ ಮಾಡುವುದು ಅಪಾಯಕಾರಿ. ಸಹೃದಯ ಮತ್ತು ಕಲಾವಿದನ ಮಧ್ಯೆ ಮಧುರ ಭಾವ ಇರಬೇಕಾಗುತ್ತದೆ.
ಆದರೆ ಇಂದಿನ ದಿನಗಳಲ್ಲಿ ಕಲೆ ಕೇವಲ ತೋರ್ಪಡಿಕೆಗೆ ಪ್ರದರ್ಶನವಾಗುತ್ತಿರುವುದು ದುರಂತ. ಶಾಸ್ತ್ರೀಯತೆ ಮರೆಯಾಗುತ್ತಿರುವುದು ಮತ್ತು ಕ್ಯಾಸೆಟ್ ಸಂಸ್ಕೃತಿಗೇ ಒಗ್ಗಿ ಹೋಗುತ್ತಿರುವುದು ಸರಿಯಲ್ಲ. ಅಂತಹ ಸಂದರ್ಭದಲ್ಲಿ ಇಡಗುಂಜಿ ಗಣಪತಿ ನೃತ್ಯ ಸಂಸ್ಥೆ ಕರಾವಳಿಯ ನೈಜ ಕಲಾವಂತಿಕೆಯ ಸೊಗಡನ್ನು ಬಯಲುಸೀಮೆಯ ಮಕ್ಕಳಿಗೆ ಪರಿಚಯ ಮಾಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಹನುಮಂತೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದ ರಾಜು ದಾತಾರ್, ಗೌರಿ ವಿಶ್ವನಾಥ್, ಡಿ.ಡಿ.ನಾಯಕ್, ಭರತನಾಟ್ಯ ನಿರ್ದೇಶಕ ವೈ.ಕೆ.ಸಾಯಿಬಾಬಾ, ತಾ.ಪಂ ಮಾಜಿ ಉಪಾಧ್ಯಕ್ಷ ಗೋಪಾಲನಾಯಕ್, ಗ್ರಾಮೀಣ ಅಭ್ಯುದಯ ಸಂಸ್ಥೆ ಕಾರ್ಯದರ್ಶಿ ಅಮಲಿ ನಾಯಕ್, ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ, ಸಂಸ್ಥೆಯ ಅಧ್ಯಕ್ಷೆ ಎಸ್.ಉಮಾ, ಕಾರ್ಯದರ್ಶಿ ಎಸ್.ಎಂ.ಸುಧೀರ್, ಶೋಭಾರಾಣಿ, ಕೆ.ಮಹಾಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.
ನೃತ್ಯ ಪ್ರದರ್ಶನ: ಇದೇ ಸಂದರ್ಭದಲ್ಲಿ ಸಂಸ್ಥೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನಡೆದವು. ಹಿನ್ನೆಲೆ ಸಂಗೀತದಲ್ಲಿ ಎಸ್.ಎಂ. ಸುಧೀರ್ (ನಟುವಾಂಗ), ರಾಜುದಾತಾರ್ (ಹಾಡುಗಾರಿಕೆ), ತಂಗವೇಲು (ಮೃದಂಗ), ಪರಮಶಿವನ್ (ಕೀಬೋರ್ಡ್), ವೆಂಕಟೇಶ್ ಸಾಗರ್ (ರಿದಂಪ್ಯಾಡ್), ದಯಾನಿಧಿ (ಮೋರ್ಸಿಂಗ್) ಸಹಕರಿಸಿದರು.