ಗ್ರಾನೈಟ್ ಕಲ್ಲು ಬಿದ್ದು ಕಾರ್ಮಿಕ ಸಾವು
ಆನೇಕಲ್ಲು: ಗ್ರಾನೈಟ್ ಕಲ್ಲು ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿ ಇನ್ನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸತ್ತವನನ್ನು ಜಾರ್ಖಂಡ್ ಮೂಲದ ರಣಜೀತ್ (35) ಎನ್ನಲಾಗಿದ್ದು, ಸುರೇಶ್ ಎಂಬಾತನ ಕಾಲು ಮುರಿದಿದ್ದು ತೀವ್ರ ಗಾಯಗಳಿಂದ ನರಳುತ್ತಿದ್ದಾನೆ. ಬೆರಿಲ್ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಅಂದಾಜು 3 ಟನ್ ಕಲ್ಲು ಸಾಗಿಸಲು ಪ್ರಯತ್ನ ಮಾಡುತ್ತಿದ್ದಾಗ ಕಲ್ಲುಗಳು ಆಯ ತಪ್ಪಿ 5 ಜನರ ಮೇಲೆ ಬಿದ್ದಿದೆ. ಕಂಚನ್ , ಸಹದೇವ್, ಜಯದೇವ್ ಅವರು ಸಣ್ಣ ಪುಟ್ಟ ಗಾಯಗಳಿಂದ ಆಶ್ಚರ್ಯಕರವಾಗಿ ಪಾರಾಗಿದ್ದಾರೆ. ರಣಜೀತ್ ಮತ್ತು ಸುರೇಶ್ ಮೇಲೆ ಕಲ್ಲುಗಳು ಬಿದ್ದು ಕಲ್ಲಿನಡಿ ಸಿಲುಕಿಕೊಂಡ ಇವರನ್ನು ಕ್ರೇನ್ ಬಳಸಿ ಹೊರ ಕರೆತರಲಾಯಿತು. ತೀವ್ರ ಗಾಯಗಳಾಗಿದ್ದ ಇವರನ್ನು ಕೂಡಲೇ ಸ್ಥಳೀಯ ವೈಎನ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು.
ರಣಜೀತ್ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು ಸುರೇಶ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಗಣಿ ಠಾಣೆಯ ಪಿಎಸ್ಸೈ ಉಮಾ ಶಂಕರ್ ದೂರನ್ನು ದಾಖಲಿಸಿಕೊಂಡಿದ್ದು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಐದೂ ಜನ ಕಾರ್ಮಿಕರು ಜಾರ್ಖಂಡ್ ಮೂಲದವರಾಗಿದ್ದು ಕಳೆದ 6 ತಿಂಗಳಿಂದ ಇಲ್ಲಿ ವಾಸವಿದ್ದರು ಎನ್ನಲಾಗಿದೆ.