ನಿಮ್ಮ ರಕ್ಷಣೆಗೆ ನಾನಿದ್ದೇನೆ: ಡಿಕೆಶಿ
ಕ.ಪ್ರ. ವಾರ್ತೆ ಚನ್ನಪಟ್ಟಣ ಮೇ 27
ನಿಮ್ಮ ರಕ್ಷಣೆಗೆ ನಾನಿದ್ದೇನೆ, ನಿಮ್ಮಲ್ಲಿ ಸ್ಥೈರ್ಯ ತುಂಬಿ ನಿಮ್ಮಿಂದಲೇ ಈ ಕ್ಷೇತ್ರದಲ್ಲಿ ಪಕ್ಷವನ್ನು ಬಲವರ್ಧನೆ ಮಾಡಿಯೇ ತೀರುತ್ತೇನೆ...ಇದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಾಲೂಕು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ ವಾಗ್ದಾನ.
ಇಲ್ಲಿನ ಪ್ರವಾಸಿ ಮಂದಿರಕ್ಕೆ ಅನೌಪಚಾರಿಕ ಭೇಟಿ ನೀಡಿದ್ದ ಅವರು ತಾಲೂಕು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಈ ಕ್ಷೇತ್ರದಲ್ಲಿ ನಮಗೆ ಸಮರ್ಥನಾಯಕ ಇಲ್ಲ ಎಂಬ ನೋವು ನಿಮಗೆ ಬೇಡ. ಆ ಕೊರಗೆ ಬಾರದಂತೆ ನಾವು ನೋಡಿ ಕೊಳ್ಳುತ್ತೇವೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಸಾದತ್ ಆಲಿಖಾನ್ ಅಲ್ಪಸಂಖ್ಯಾತ ಮುಖಂಡ ಎಂಬಕಾರಣಕ್ಕೆ ಪಕ್ಷದಿಂದ ಟಿಕೆಟ್ ಕೊಡಲಾಗಿತ್ತು. ಆದರೆ ನಿರೀಕ್ಷಿತ ಫಲಿತಾಂಶ ದೊರೆಯದಾಗಿದ್ದು ಇದರಿಂದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದ್ದು ಇದನ್ನು ಸರಿಪಡಿಸುವ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದರು.
ಬಾವುಟ ಹಿಡಿದ ಕೈಬಲ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದ ಕೈಗಳು ಕೆಲವೇ ಕೆಲವಾದರೂ ಆ ಕೈಗಳನ್ನು ಬಲಪಡಿಸಿ ಅವರ ಕೈಗೆ ಅಧಿಕಾರ ಸಿಗುವಂತೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಾಕಷ್ಟು ಮಂದಿಯ ಬೆವರಿನ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಕಾಂಗ್ರೆಸ್ ಎಂಬ ಹೆಮ್ಮರವನ್ನು ಬಲಗೊಳಿಸಲು ಗೊಬ್ಬರ ನೀರೆರೆದವರಿಗೆ ಪ್ರತೀಫಲ ದೊರಕಬೇಕೆಂಬುದು ನನ್ನ ಸಿದ್ಧಾಂತ. ಅದಕ್ಕಾಗಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಆತಂಕ ಬೇಡ: ನನಗೆ ಸಚಿವ ಸ್ಥಾನ ದೊರಕಲಿಲ್ಲ ಎಂದು ನೀವೆಲ್ಲ ಹೋರಾಟ ಮಾಡಿದ್ದೀರಿ, ನಿಮ್ಮೆಲ್ಲರ ಅಭಿಪ್ರಾಯಕ್ಕೆ ಹೈಕಮ್ಯಾಂಡ್ ಮನ್ನಣೆ ನೀಡಲಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತಳೆಯಲಿದೆ ಎಂದರು.
ನಾನು ಸಚಿವನಾಗಿರಲಿ ಇಲ್ಲದೇ ಇರಲಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಲು ಬಿಡುವುದಿಲ್ಲ. ಎಂತಹುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ನಿಲ್ಲುತ್ತೇನೆ, ನೀವ್ಯಾರು ಎದೆಗುಂದದೆ ಪಕ್ಷ ಸಂಘಟನೆಗೆ ಮುಂದಾಗಿ ಎಂದರು.
ಎಂಟು ಎಂಬತ್ತಾಗುತ್ತೆ: ಈಬಾರಿಯ ಚುನಾವಣೆಯಲ್ಲಿ ಕೇವಲ 8 ಸಾವಿರ ಮತಗಳು ಬಂದಿರಬಹುದು. ಆದರೆ ಇದು ಮುಂದಿನ ದಿನಗಳಲ್ಲಿ 80 ಸಾವಿರವಾಗಲಿದೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಯುವಕಾಂಗ್ರೆಸ್ ಅಧ್ಯಕ್ಷ ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಕಾಂಗ್ರೆಸ್ ಮುಖಂಡರಾದ ಅಸ್ಮತ್ ಪಾಷಾ ನಿಜಾಮಿ, ಪಿ.ಡಿ.ರಾಜು,ನಾಗೇಂದ್ರ ಮುಂತಾದವರು ಉಪಸ್ಥಿತರಿದ್ದ ರು.