ಬದುಕಿನಲ್ಲಿ ಪ್ರತಿಯೊಬ್ಬರಿಂದಲೂ ಕಲಿಯಬೇಕು
ಕ.ಪ್ರ. ವಾರ್ತೆ ಟಿ ಕನಕಪುರ ಟಿ ಮೇ 27
ಬದುಕಿನಲ್ಲಿ ನಾವು ಪ್ರತಿಯೊಬ್ಬರಿಂದಲೂ ಕಲಿಯಬೇಕು, ಕಲಿತ ವಿಚಾರಗಳನ್ನು ಎಲ್ಲರಿಗೂ ಹಂಚಬೇಕು, ಎಂದು ಬ್ರಹ್ಮರ್ಷಿ ಸುಭಾಷ್ಪತ್ರೀಜಿ ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮದ ಪಿರಮಿಡ್ ವ್ಯಾಲಿಯ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಬುದ್ಧ ಪೌರ್ಣಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಉದ್ಘಾಟನೆಯನ್ನು ನವದೆಹಲಿಯ ಮಹಾಯೋಗಿ ಪೈಲೆಟ್ಬಾಬಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲಹಾಬಾದ್ನ ಪೂನಂ ಮಾತಾಜಿ ಮಾತನಾಡಿ, ಹುಚ್ಚುಕುದುರೆಯಂತಹ ಮನಸ್ಸನ್ನು ಬುದ್ಧಿಯ ಲಗಾಮಿನಿಂದ ನಿಯಂತ್ರಿಸಬೇಕು. ಆಧ್ಯಾತ್ಮ ಹಾಗೂ ಧ್ಯಾನಗಳ ಮೂಲಕ ಮನೋನಿಯಂತ್ರಣ ಸುಲಭ ಸಾಧ್ಯ, ಬ್ರಹ್ಮರ್ಷಿ ಪತ್ರೀಜಿ ಪಸರಿಸುತ್ತಿರುವ ಧ್ಯಾನ ಪದ್ಧತಿಯನ್ನು ಸುಲಭವಾಗಿ ಎಲ್ಲರೂ ಅನುಸರಿಸಿ ಧ್ಯಾನಿಗಳಾಗಬೇಕು, ಎಂದು ಕರೆ ನೀಡಿದರು.
ಸರ್ಪಭೂಷಣಮಠದ ಶ್ರೀ ಮಲ್ಲಿಕಾರ್ಜುನ ದೇವರು ಮಾತನಾಡುತ್ತಾ, ಎಲ್ಲವನ್ನೂ ಬಯಸುವ ಮನಸ್ಸೇ ಬಂಧನಕ್ಕೂ ಮುಕ್ತಿಗೂ ಕಾರಣವಾಗಿದೆ, ಮನಸ್ಸು ಉಸಿರಿನೊಂದಿಗೆ ಬೆರೆಯುವವರೆಗೆ ಮನೋ ನಿಗ್ರಹವಾಗುವುದಿಲ್ಲ. ಮನಸ್ಸಿಗೆ ಸಂಸ್ಕಾರ, ಶಕ್ತಿಗಳನ್ನು ತುಂಬಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ಮಹಾಯೋಗಿ ಪೈಲೆಟ್ ಬಾಬಾ ಮಾತನಾಡುತ್ತಾ, ಸಂಸ್ಕೃತಿ, ಪರಂಪರೆ, ನಾಗರಿಕತೆಗಳಿಗೆ ಮನಸ್ಸೇ ಕಾರಣ. ಮನಸ್ಸು ವೇದ ಉಪನಿಷತ್, ಬೈಬಲ್, ಕುರಾನ್ ಮೊದಲಾದ ಮಹಾಗ್ರಂಥಗಳ ಜ್ಞಾನವನ್ನು ನೀಡಿದೆ. ನಮ್ಮ ಇರುವಿಕೆಗೆ ಸೃಷ್ಟಿಗೆ ಮನಸ್ಸೇ ಕಾರಣವಾಗಿದ್ದು ಅದನ್ನು ಎಂದಿಗೂ ಉಪೇಕ್ಷಿಸಬಾರದು. ವಿಶ್ವಶಾಂತಿ ಮೂಡಲು ಧ್ಯಾನಮಾರ್ಗ ಅತ್ಯುತ್ತಮವಾಗಿದೆ ಎಂದರು.