ಬುದ್ಧನ ತತ್ವಾದರ್ಶಗಳನ್ನು ಪಾಲಿಸಿ: ಡಾ. ಅಪ್ಪಗೆರೆ
ರಾಮನಗರ: ಬುದ್ಧನ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಗುಲ್ಬರ್ಗಾ ಕೇಂದ್ರ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಕರೆ ನೀಡಿದರು. ಜಾನಪದ ಲೋಕದಲ್ಲಿ ಪ್ರಬುದ್ಧ ಬಳಗ ಸಂಘಟನೆಯಿಂದ ನಡೆದ ಬುದ್ಧ ಪ್ರಜ್ಞೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಬುದ್ಧನ ಸಮಸಮಾಜ ಕನಸನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದರು. ಜಾನಪದ ವಿದ್ವಾಂಸ ಡಾ.ಕುರುವ ಬಸವರಾಜು ಮಾತನಾಡಿ, ಕನ್ನಡದ ವಚನ ಸಾಹಿತ್ಯದ ಮೇಲೆ ಬುದ್ಧನ ತತ್ವಗಳ ನೆರಳಿರುವುದನ್ನು ಕಾಣಬಹುದು. ಬುದ್ಧನ ಸಂದೇಶಗಳು ಸಾರ್ವಕಾಲಿಕವಾದುವು ಎಂದು ಅಭಿಪ್ರಾಯಪಟ್ಟರು.