ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೂರದಾಸರ ಜಯಂತಿ ಕಾರ್ಯಕ್ರಮ

Rashmi Kasaragodu
Updated On : 28 May 2013, 1:07 am

ವಿಜಯಪುರ: ಸಂಗೀತದ ಏಳು ಸ್ವರಗಳು ಆಧ್ಯಾತ್ಮಿಕ ಸಾಧನೆಗೆ ಏಳು ಚಕ್ರಗಳ ಅರಿವನ್ನು ಉಂಟುಮಾಡುತ್ತದೆ ಎಂದು ಯೋಗ ಗುರು ರವೀಂದ್ರ ತಿಳಿಸಿದರು. ಅವರು ಪಟ್ಟಣದ ವಿಜಯ ಕಾಲೇಜಿನಲ್ಲಿ ವಿಕಲ ಚೇತನ ಸಂಗೀತಗಾರರನ್ನೊಳಗೊಂಡ ಸ್ವರ ಸಕ್ಷಮ ಸಂಗೀತ ತಂಡದೊಂದಿಗೆ ಸೂರದಾಸರ ಹಾಗೂ ಪುಟ್ಟರಾಜ ಗವಾಯಿಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ನಾಗಲೋಟದಲ್ಲಿ ಓಡುತ್ತಿರುವ ಇಂದಿನ ಜೀವನ ಚಕ್ರದಲ್ಲಿ ಒತ್ತಡದ ಜೀವನ ಹೆಚ್ಚಾಗಿದ್ದು ನೆಮ್ಮದಿ ಪಡೆಯಬೇಕೆಂದರೆ ಜನ ಸಂಗೀತವನ್ನು ಆಲಿಸುವ ಮೂಲಕ ಒತ್ತಡದಿಂದ ಮುಕ್ತರಾಗಬಹುದು. ಹಿಂದಿ  ಸಾಹಿತ್ಯಾಕಾಶದ ನೇಸರ, ಕೃಷ್ಣ ಭಕ್ತಿಯ ಸಾಗರ, ಸಂಗೀತ-ಕಾವ್ಯ ಸಾಹಿತ್ಯದ ತ್ರಿವೇಣಿ ಸಂಗಮದ ಮೇರು ಪರ್ವತವಾದ ಸೂರದಾಸರು  ಕವಿತೆಗಳನ್ನು ರಚಿಸಿ, ಸಂಗೀತ, ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಡಾ. ವಿಶಾಲ್ ಚಿಕ್ಕಬಳ್ಳಾಪುರ ಡಿಸಿ
ಚಿಕ್ಕಬಳ್ಳಾಪುರ: ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಡಾ. ಆರ್. ವಿಶಾಲ್ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.  ವಿಧಾನಸಭಾ ಚುನಾವಣೆ ನಡೆಯುತ್ತಿದ್ದ ಪ್ರಾರಂಭದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ. ಎನ್. ಮಂಜುಳಾರವರು ತಮ್ಮ ಹತ್ತಿರ ಸಂಬಂಧಿ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದಾರೆ ಎಂಬ ಕಾರಣದಿಂದ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಶಂಕರ್ ಜಿಲ್ಲಾಧಿಕಾರಿಯಾಗಿ ಬಂದು ಜಿಲ್ಲೆಯಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ದು ಇವರು ಕೇವಲ ಎರಡು ತಿಂಗಳೊಳಗೆ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ. ಈಗ ನೂತನ ಜಿಲ್ಲಾಧಿಕಾರಿ ವಿಶಾಲ್ ನಿರ್ಗಮಿತ ಜಿಲ್ಲಾಧಿಕಾರಿ ಶಂಕರ್ ಅವರಿಂದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.   ಮೊದಲನೇ ದಿನವೇ ಅಧಿಕಾರಿಗಳ ಸಭೆ ನಡೆಸಿದ ನೂತನ ಜಿಲ್ಲಾಧಿಕಾರಿ ವಿಶಾಲ್, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.  ಜಿಲ್ಲೆಯು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳನ್ನು ತಿಳಿದು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಂಡು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುವುದಾಗಿ ತಿಳಿಸಿದರು.  
ಶಾಲೆ ಆವರಣವೋ ಜೂಜು ಅಡ್ಡೆಯೋ!
ಬಾಗೇಪಲ್ಲಿ: ಸರ್ಕಾರಿ ಶಾಲೆ ಆವರಣವನ್ನು ಜೂಜುಅಡ್ಡೆಯನ್ನಾಗಿ ಪರಿವರ್ತಿಸಿಕೊಂಡು ಜೂಜಾಟವಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಠಾಣೆಯ ಪೊಲೀಸರು ತಾಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಂದರ್‌ಬಾಹರ್ ಆಡುತ್ತಿದ್ದ ಗ್ರಾಮದ ಮಲ್ಲಿಕಾರ್ಜುನ (28), ಹರಿಪ್ರಸಾದ್ (28) ಮತ್ತು ಗಂಗರಾಜು (30) ಎಂಬುವವರನ್ನು ಮತ್ತು ನಂತರ ತಾಲೂಕಿನ ಪರಗೋಡು ಗ್ರಾಮದ ಸರ್ಕಾರಿ ಶಾಲೆಯ ಎರಡನೇ ಮಹಡಿ ಆವರಣದಲ್ಲಿ ಜೂಜಾಟವಾಡುತ್ತಿದ್ದ ನಾಗೇಂದ್ರ (20), ವೆಂಕಟೇಶ್ (22) ಮತ್ತು ವಿಶ್ವನಾಥ (25) ಎಂಬುವವರನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆ ಸಬ್ ಇನ್ಸೆಪೆಕ್ಟರ್ ಶಿವಕುಮಾರ್ ಮತ್ತು ಸಿಬ್ಬಂದಿ, ರಾಘವೇಂದ್ರ, ಶಿವಣ್ಣ, ಆಂಜನೇಯರೆಡ್ಡಿ, ರವಿ, ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಬೆಂಗಳೂರು ಬಸ್‌ಅಸಮರ್ಪಕ ಸೇವೆ
ಚಿಂತಾಮಣಿ: ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವ ಕಾರಣಕ್ಕಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾದು ಬೇಸತ್ತು ವ್ಯವಸ್ಥಾಪಕರ ಕಾರ್ಯವೈಖರಿ ಬಗ್ಗೆ ಆರೋಪಿಸಿದ್ದಾರೆ.  ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸರ್ಕಾರಿ ನೌಕರರು ಹಾಗೂ ವಿವಿಧ ಕಾರ್ಖಾನೆಗಳಿಗೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಮಹಾನಗರಕ್ಕೆ ಪ್ರಯಾಣಿಸಲು ಕೆಂಪು ಬಸ್ ಹಲವು ಗಂಟೆಗಳು ಕಾದು ಬಸ್ಸುಗಳು ಬಾರದಿದ್ದ ಕಾರಣಕ್ಕೆ ಘಟಕದ ವ್ಯವಸ್ಥಾಪಕರ ಕಾರ್ಯವೈಖರಿ ಬಗ್ಗೆ ಅಸಮದಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement